ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಆಹ್
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ


ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದ್ದು, ‘ಅರಿವು’ ಶೈಕ್ಷಣಿಕ ಸಾಲ ಯೋಜನೆಗೆ ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಟಿ. ಹೊನ್ನೂರಪ್ಪ ಅವರು ತಿಳಿಸಿದ್ದಾರೆ.

*ಅರ್ಹತೆ:*

ಅರ್ಜಿದಾರರು ಮಡಿವಾಳ ಹಾಗೂ ಅದರ ಉಪಜಾತಿಗಳಿಗೆ ಸೇರಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ. ಸಾಮಾನ್ಯ ವಯೋಮಿತಿ 18 ರಿಂದ 55 ವರ್ಷಗಳ ಒಳಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ಗರಿಷ್ಠ ರೂ. 98,000 ಹಾಗೂ ನಗರ ಪ್ರದೇಶದವರಿಗೆ ರೂ. 1,20,000 ಮಿತಿಯೊಳಗಿರಬೇಕು. ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಕಲ್ಪಿಸಲಾಗುವುದು. ಈ ಹಿಂದೆ ನಿಗಮ ಅಥವಾ ಸರ್ಕಾರದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರಬಾರದು.

ಅರ್ಜಿದಾರರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಆಧಾರ್ ಸಂಖ್ಯೆಗೆ ಜೋಡಣೆಯಾಗಿರಬೇಕು. ಅಲ್ಲದೆ, ಆಧಾರ್ ಕಾರ್ಡ್ನಲ್ಲಿರುವ ಹೆಸರು ಮತ್ತು ವಿಳಾಸವು ಜಾತಿ/ಆದಾಯ ಪ್ರಮಾಣಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ಗೆ ತಾಳೆಯಾಗಬೇಕು. ಆಯ್ಕೆಯಲ್ಲಿ ಮಹಿಳೆಯರಿಗೆ ಶೇ. 33, ವಿಕಲಚೇತನರಿಗೆ ಶೇ. 5 ಹಾಗೂ ತೃತೀಯ ಲಿಂಗಿಗಳಿಗೆ ಶೇ. 1 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ.

*ಯೋಜನೆಗಳು:*

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ (ನೂತನ ಮತ್ತು ನವೀಕರಣ): ವಯೋಮಿತಿ 18 ರಿಂದ 30 ವರ್ಷ, ವಾರ್ಷಿಕ ವರಮಾನ ಮಿತಿ ರೂ. 3.50 ಲಕ್ಷ. ಸ್ವಾವಲಂಬಿ ಸಾರಥಿ ಯೋಜನೆ: ವಯೋಮಿತಿ 21 ರಿಂದ 45 ವರ್ಷಗಳು. ವಿದೇಶಿ ವ್ಯಾಸಂಗ ಸಾಲ ಯೋಜನೆ: ವಾರ್ಷಿಕ ವರಮಾನ ಮಿತಿ ರೂ. 15 ಲಕ್ಷ. ವಯೋಮಿತಿ ಸ್ನಾತಕೋತ್ತರ ಪದವೀಧರರಿಗೆ 25 ವರ್ಷ ಹಾಗೂ ಪಿಎಚ್.ಡಿ ಅಭ್ಯರ್ಥಿಗಳಿಗೆ 27 ವರ್ಷ.

ಗಂಗಾ ಕಲ್ಯಾಣ ಯೋಜನೆ: ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಹಾಗೂ ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.

ಆಧುನಿಕ ಲ್ಯಾಂಡ್ರಿ ಯೋಜನೆ (ಹೊಸ ಯೋಜನೆ): ಬೆಂಗಳೂರು ಮತ್ತು ಮೈಸೂರು ನಗರದ ಧೋಬಿ ಘಾಟ್ಗಳಲ್ಲಿ ತಲಾ ರೂ. 75 ಲಕ್ಷ ವೆಚ್ಚದಲ್ಲಿ ಆಧುನಿಕ ಯಂತ್ರೋಪಕರಣಗಳೊಂದಿಗೆ (ವಾಷಿಂಗ್ ಮೆಷಿನ್, ಡ್ರೆಯರ್, ಐರನಿಂಗ್ ಮೆಷಿನ್) ಆಧುನಿಕ ಲ್ಯಾಂಡ್ರಿ ಸ್ಥಾಪನೆ.

2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಈವರೆಗೆ ಸೌಲಭ್ಯ ಪಡೆಯದೇ ಇರುವವರು ಅದೇ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ; ಅವರನ್ನು ಪ್ರಸ್ತುತ ಸಾಲಿಗೂ ಪರಿಗಣಿಸಲಾಗುವುದು. ಆದರೆ, ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಹೊಸದಾಗಿ ಅರ್ಜಿ ಹಾಕಬಹುದು.

ಅರ್ಹರು ಬೆಂಗಳೂರು-ಒನ್, ಕರ್ನಾಟಕ-ಒನ್, ಅಟಲ್-ಜೀ ಜನಸ್ನೇಹಿ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರಗಳ ಮೂಲಕ ‘ಸೇವಾ ಸಿಂಧು’ ಪೋರ್ಟಲ್ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗಾಗಿ ಕೇಂದ್ರ ಕಚೇರಿ (080-22374832/833) ಹಾಗೂ ಜಿಲ್ಲಾ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande