
ಗದಗ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಸಚಿವ ಬಸವರಾಜ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದಾರೆ ಎನ್ನಲಾದ ಹೇಳಿಕೆಯನ್ನು ಖಂಡಿಸಿ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.
ಗದಗ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಶಿವರಾಮಕೃಷ್ಣ ಸೇವಾ ಸಮಿತಿ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಭಿಕ್ಷಾಟನೆ ಮಾಡುವ ಮೂಲಕ ಹಣ ಸಂಗ್ರಹಿಸಿದರು. ಸಾರ್ವಜನಿಕರ ಬಳಿಯೂ ಹಣಕ್ಕಾಗಿ ಮನವಿ ಮಾಡಿ ಹಣ ಸಂಗ್ರಹಿಸುವ ಮೂಲಕ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ವ್ಯಂಗ್ಯಾತ್ಮಕವಾಗಿ ಟಾಂಗ್ ನೀಡಿದರು.
ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಮಾರುಕಟ್ಟೆಯ ವಿವಿಧ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹಿಸಿದರು. ಈ ವೇಳೆ ಸಚಿವ ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಹಣ ಬೇಕಾಗಿದ್ದರೆ ತಾವು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ನೀಡುವುದಾಗಿ ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಯರೆಡ್ಡಿ ಹೇಳಿಕೆಗೆ ವಿರೋಧ
ಕೊಪ್ಪಳದಲ್ಲಿ ನಡೆದ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯಿಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಮುಸ್ಲಿಂ ಓಲೈಕೆಯ ಭರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕೆ ಸ್ಪಷ್ಟನೆ ನೀಡಬೇಕು. ಅಲ್ಲದೆ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
‘ಭಿಕ್ಷಾಟನೆ ಹಣ ಸಚಿವರ ಕಚೇರಿಗೆ’
ಹಜ್ ಯಾತ್ರೆಗೆ ತೆರಳಲು ಹಣದ ಅಗತ್ಯವಿದ್ದರೆ ಹಿಂದೂ ಕಾರ್ಯಕರ್ತರು ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಕೊಡಲು ಸಿದ್ಧರಿದ್ದಾರೆ ಎಂದು ಪ್ರತಿಭಟನಾಕಾರರು ವ್ಯಂಗ್ಯವಾಡಿದರು.
ಗದಗ ನಗರದ ವಿವಿಧ ಅಂಗಡಿ-ಮುಂಗಟ್ಟುಗಳು ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬೆಂಗಳೂರಿನಲ್ಲಿರುವ ಸಚಿವ ಬಸವರಾಜ ರಾಯರೆಡ್ಡಿ ಅವರ ಕಚೇರಿಗೆ ಕಳುಹಿಸುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ.
ಸಚಿವರ ಹೇಳಿಕೆ ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿದ ಕಾರ್ಯಕರ್ತರು, ಮುಂದಿನ ದಿನಗಳಲ್ಲಿ ಸಚಿವರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪ್ರತಿಭಟನೆಯ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಚಿವರ ಹೇಳಿಕೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಈ ವಿನೂತನ ಪ್ರತಿಭಟನೆ ಸಾರ್ವಜನಿಕರ ಗಮನ ಸೆಳೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP