ಹೆಬ್ಬಾಳ ಟನಲ್ ರಸ್ತೆ ಯೋಜನೆ ಅವೈಜ್ಞಾನಿಕ: ಐಐಎಸ್ಸಿ ತಜ್ಞರ ವರದಿ
ಅವೈಜ್ಞಾನಿಕ ಎಂದ ತಜ್ಞರು!
ಹೆಬ್ಬಾಳ ಟನಲ್ ರಸ್ತೆ ಯೋಜನೆ ಅವೈಜ್ಞಾನಿಕ: ಐಐಎಸ್ಸಿ ತಜ್ಞರ ವರದಿ


ಬೆಂಗಳೂರು, 03ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಹೆಬ್ಬಾಳ ಜಂಕ್ಷನ್ನಲ್ಲಿ ಟ್ರಾಫಿಕ್ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿದ್ದ ಟನಲ್ ರಸ್ತೆ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಸಮಸ್ಯೆಗೆ ಮುಕ್ತಿ ಸಿಗುವ ಬದಲು ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಜ್ಞರ ತಂಡ ಎಚ್ಚರಿಸಿದೆ. ಈ ಕುರಿತು ವಿಸ್ತೃತ ವರದಿಯೊಂದನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ.

ತಾತ್ಕಾಲಿಕ ರಿಲೀಫ್ ಮಾತ್ರ: 2.28 ಕಿಲೋಮೀಟರ್ ಉದ್ದದ ಈ ಶಾರ್ಟ್ ಟನಲ್ ರಸ್ತೆಯಿಂದ ಸ್ಥಳೀಯವಾಗಿ ಕೆಲ ಕಾಲ ಮಾತ್ರ ಅನುಕೂಲವಾಗಲಿದೆಯೇ ಹೊರತು, ಇದು ಶಾಶ್ವತ ಪರಿಹಾರವಲ್ಲ. ಸುರಂಗದ ಪ್ರವೇಶ ಹಾಗೂ ನಿರ್ಗಮನಾ ಕೇಂದ್ರಗಳಲ್ಲಿ ಭೀಕರ ಸಂಚಾರ ದಟ್ಟಣೆ ಮುಂದುವರಿಯಲಿದೆ.ಹೊಸ ಚೋಕ್ಪಾಯಿಂಟ್ಗಳು: ವೆಟರ್ನರಿ ಆಸ್ಪತ್ರೆ ಹಾಗೂ ಎಸ್ಟೀಮ್ ಮಾಲ್ ಬಳಿ ಹೊಸ ಚೋಕ್ಪಾಯಿಂಟ್ಗಳು ಸೃಷ್ಟಿಯಾಗಲಿದ್ದು, ವಾಹನಗಳು ಸುರಂಗದ ಒಳಭಾಗದಲ್ಲೇ ಸಾಲುಗಟ್ಟಿ ನಿಲ್ಲುವ ಆತಂಕವಿದೆ. 2040ರ ವೇಳೆಗೆ ಯೋಜನೆಯು ಪೂರ್ಣಗೊಂಡರೂ ಹೆಬ್ಬಾಳದಿಂದ ಮೇಕ್ರಿ ಸರ್ಕಲ್ವರೆಗೆ ಟ್ರಾಫಿಕ್ ಕಡಿಮೆ ಆಗುವುದಿಲ್ಲ.

ಪ್ರವಾಹ ಭೀತಿ ಮತ್ತು ಅಡಿಪಾಯಕ್ಕೆ ಅಪಾಯ: ಹೆಬ್ಬಾಳ ಕೆರೆಯ ಕ್ಯಾಚ್ಮೆಂಟ್ ಪ್ರದೇಶದಲ್ಲೇ ಸುರಂಗ ನಿರ್ಮಿಸುತ್ತಿರುವುದರಿಂದ ಭಾರಿ ಮಳೆಯಾದಾಗ ಸುರಂಗದೊಳಗೆ ನೀರು ನುಗ್ಗಿ ಪ್ರವಾಹ ಉಂಟಾಗುವ ಗಂಭೀರ ಅಪಾಯವಿದೆ. ಇದು ಹೆಬ್ಬಾಳ ಕೆರೆ, ಉದ್ಯಾನ ಹಾಗೂ ಹಾಲಿ ಇರುವ ಫ್ಲೈಓವರ್ ಪಿಲ್ಲರ್ಗಳ ಅಡಿಪಾಯಕ್ಕೂ ಅಪಾಯ ತಂದೊಡ್ಡಲಿದೆ.ಹೆಚ್ಚುವರಿ ಆರ್ಥಿಕ ಹೊರೆ: ಪ್ರಾರಂಭಿಕ ಅಂದಾಜಿಗಿಂತ ಸುಮಾರು ಆರು ಪಟ್ಟು ವೆಚ್ಚ ಹೆಚ್ಚಾಗಲಿದ್ದು, ಇದರಿಂದ ಟೋಲ್ ದರವೂ ದುಬಾರಿಯಾಗಲಿದೆ. ಇದು ಸಾಮಾನ್ಯ ಜನರ ಓಡಾಟಕ್ಕೆ ಆರ್ಥಿಕ ಹೊರೆಯಾಗಲಿದೆ.

ಯೋಜನೆಯ ಸಾಮರ್ಥ್ಯವನ್ನು ತೀರಾ ಕಡಿಮೆ ಅಂದಾಜಿಸಲಾಗಿದ್ದು, ಶೇಕಡ 50 ರಿಂದ 80ರಷ್ಟು ಟ್ರಾಫಿಕ್ ಡೈವರ್ಷನ್ ಆಗುತ್ತದೆ ಎಂಬ ಲೆಕ್ಕಾಚಾರ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಯಾವುದೇ ಸಮರ್ಪಕ ವೈಜ್ಞಾನಿಕ ಅಧ್ಯಯನ ನಡೆಸದೆ ಸರ್ಕಾರ ಟೆಂಡರ್ ಕರೆದಿರುವುದನ್ನು ಖಂಡಿಸಿರುವ ತಜ್ಞರ ತಂಡ, ತಕ್ಷಣವೇ ಕಾಮಗಾರಿಯನ್ನು ತಡೆಹಿಡಿಯುವಂತೆ ಮನವಿ ಮಾಡಿದೆ.

ವಾಹನ ಸವಾರರ ಅಸಮಾಧಾನಟನಲ್ ರಸ್ತೆಯಲ್ಲಿ ಕೇವಲ ಕಾರುಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ದಟ್ಟಣೆ ಸಮಸ್ಯೆ ನಿವಾರಣೆಯಾಗುವುದಿಲ್ಲ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಬದಲಿಗೆ ಮೆಟ್ರೋ ಮಾರ್ಗಗಳನ್ನು ಚುರುಕಾಗಿ ವಿಸ್ತರಿಸುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದರಿಂದ ಮಾತ್ರ ನಗರದ ಸಂಚಾರ ದಟ್ಟಣೆಗೆ ನಿಜವಾದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande