



ಸಂಡೂರು, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಗ್ರಾಮೀಣ ಹಾಗೂ ಅಗತ್ಯವಿರುವ ಸಮುದಾಯಗಳಿಗೆ ಮನೆ ಬಾಗಿಲಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಜೆ ಎಸ್ ಡಬ್ಲೂ ಫೌಂಡೇಶನ್ ವತಿಯಿಂದ 2026–27ನೇ ಸಾಲಿನ ಮೊಬೈಲ್ ಆರೋಗ್ಯ ಘಟಕಗಳ ಗ್ರಾಮ ಭೇಟಿ ಕ್ಯಾಲೆಂಡರ್ ಅನ್ನು ಗುರುವಾರ ಸಂಡೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿತು.
ಗ್ರಾಮಗಳಲ್ಲಿ ಜನರಿಗೆ ಸುಲಭವಾಗಿ ಲಭ್ಯವಾಗುವ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಜೆ ಎಸ್ ಡಬ್ಲೂ ಫೌಂಡೇಶನ್ ಸಹಯೋಗದಲ್ಲಿ ಅಪೋಲೋ ಟೆಲಿಮೆಡಿಸಿನ್ ನೆಟ್ವರ್ಕಿಂಗ್ ಫೌಂಡೇಶನ್ ಈ ಸೇವೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಸಂಡೂರು ಶಾಸಕಿ ಶ್ರೀಮತಿ ಇ. ಅನ್ನಪೂರ್ಣರವರು ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಮೊಬೈಲ್ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಡೂರು ಶಾಸಕಿ ಶ್ರೀಮತಿ ಇ. ಅನ್ನಪೂರ್ಣ ಅವರು, ಗ್ರಾಮೀಣ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಮೊಬೈಲ್ ಆರೋಗ್ಯ ಘಟಕಗಳ ಕೊಡುಗೆಯನ್ನು ಶ್ಲಾಘಿಸಿದರು. ಈ ಸೇವಗಳಿಂದ ಗ್ರಾಮಗಳಲ್ಲಿಯೇ ಜನರು ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿದ್ದು, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮೇಲಿನ ರೋಗಿಗಳ ಒತ್ತಡವೂ ಕಡಿಮೆಯಾಗುತ್ತಿದೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿಗೆ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸಲು ಹಾಗೂ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು. ಸ್ಥಳೀಯ ಸಮುದಾಯದ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆಗಳನ್ನು ನೀಡುತ್ತಿರುವಜೆ ಎಸ್ ಡಬ್ಲೂ ಫೌಂಡೇಶನ್ನ್ನು ಅವರು ಅಭಿನಂದಿಸಿದರು.
ಜೆಎಸ್ಡಬ್ಲ್ಯೂ ಫೌಂಡೇಶನ್ನ ದಕ್ಷಿಣ ಭಾರತ ವಲಯದ ಮುಖ್ಯಸ್ಥರಾದ ಪೆದ್ದಣ್ಣ ಬೀದಲಾ ಅವರು ಮಾತನಾಡಿ, ಸಂಡೂರು ತಾಲೂಕಿನ ಹಳ್ಳಿಗಳಲ್ಲಿ ಮೊಬೈಲ್ ಆರೋಗ್ಯ ಘಟಕಗಳ ಸೇವೆಗಾಗಿ ಜೆ ಎಸ್ ಡಬ್ಲೂ ಫೌಂಡೇಶನ್ ಸುಮಾರು ₹1.5 ಕೋಟಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು. ಆರೋಗ್ಯ ಇಲಾಖೆಯ ಸಹಕಾರ ಹಾಗೂ ಚುನಾಯಿತ ಪ್ರತಿನಿಧಿಗಳ ಬೆಂಬಲವನ್ನು ಅವರು ಶ್ಲಾಘಿಸಿ, ಈ ಸೇವೆಗಳನ್ನು ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರಸ್ತುತ ಸಂಚಾರಿ ಆರೋಗ್ಯ ಘಟಕಗಳು 90 ಗ್ರಾಮಗಳಿಗೆ ಸೇವೆಗಳನ್ನು ಒದಗಿಸುತ್ತಿದ್ದು ಒಳಗೊಂಡಿದ್ದು, ಆರಂಭದಿಂದ ಏಪ್ರಿಲ್ 2026ರವರೆಗೆ ಸುಮಾರು 67,000 ರೋಗಿಗಳ ಮನೆ ಬಾಗಿಲಿನ ಆರೋಗ್ಯ ಸೇವೆಗಳನ್ನು ಒದಗಿಸಿದೆ. ಪ್ರತಿ ಮೊಬೈಲ್ ಆರೋಗ್ಯ ಘಟಕದಲ್ಲಿ ವೈದ್ಯರು, ಔಷಧಿಕಾರರು ಹಾಗೂ ರೋಗಿ ಸಹಾಯಕರನ್ನು ಒಳಗೊಂಡ ತಂಡ ಕಾರ್ಯನಿರ್ವಹಿಸುತ್ತಿದ್ದು, ಸಮಾಜ ಸೇವಕರ ಮೇಲ್ವಿಚಾರಣೆಯಲ್ಲಿ ಸೇವೆ ನೀಡಲಾಗುತ್ತಿದೆ. ಈ ಘಟಕಗಳು ಆರೋಗ್ಯ ಸೇವೆಗಳನ್ನು ಗ್ರಾಮಗಳಿಗೆ ತೆರಳಿ ಒದಗಿಸುತ್ತಿದ್ದು, ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ದುರ್ಬಲ ವರ್ಗದ ಸಮುದಾಯದವರಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ. ಸೇವೆಗಳಲ್ಲಿ ವೈದ್ಯರ ಸಮಾಲೋಚನೆ, ಪ್ರಯೋಗಾಲಯ ಪರೀಕ್ಷೆ, ಸಮಾಲೋಚನೆ, ಮನೆ ಭೇಟಿ, ಔಷಧ ವಿತರಣೆ ಹಾಗೂ ಉನ್ನತ ಮಟ್ಟದ ಚಿಕಿತ್ಸೆಗೆ ರೆಫರಲ್ ಸೇರಿವೆ. ಫಲಾನುಭವಿಗಳ ಮಾಹಿತಿ ಹಾಗೂ ಸೇವಾ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುತ್ತಿದ್ದು, ಇದರಿಂದ ಸೇವೆಗಳ ಉತ್ತಮ ಮೇಲ್ವಿಚಾರಣೆ ಮತ್ತು ಮುಂದುವರಿದ ಅನುಸರಣೆಗೆ ಅನುಕೂಲವಾಗುತ್ತಿದೆ.
2026–27ನೇ ಸಾಲಿನ ವಿವರವಾದ ಕ್ಯಾಲೆಂಡರ್ ಬಿಡುಗಡೆ ಮಾಡುವ ಉದ್ದೇಶವು ಗ್ರಾಮಸ್ಥರಿಗೆ ಸಂಚಾರಿ ಆರೋಗ್ಯ ಘಟಕಗಳ ನಿಗದಿತ ಭೇಟಿ ದಿನಾಂಕಗಳು ಹಾಗೂ ಲಭ್ಯವಿರುವ ಆರೋಗ್ಯ ಸೇವೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವುದಾಗಿದೆ. ನಿಯಮಿತವಾಗಿ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳು ದೊರೆಯುವುದರಿಂದ ಸಮುದಾಯದ ಜನರಿಗೆ ಸಮಯೋಚಿತ ಚಿಕಿತ್ಸೆ ಪಡೆಯಲು, ಆರಂಭಿಕ ಹಂತದಲ್ಲೇ ಸೂಕ್ತ ಸೇವೆ ಮತ್ತು ಸಮಾಲೋಚನೆಯ ಮೂಲಕ ಆರೋಗ್ಯ ಸಮಸ್ಯೆಗಳು ಗಂಭೀರವಾಗುವುದನ್ನು ತಡೆಯಲು ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಆಸ್ತಮಾ ಸೇರಿದಂತೆ ದೀರ್ಘಕಾಲಿಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿರ್ವಹಿಸಲು ಸಹಾಯವಾಗುತ್ತಿದೆ. ಈ ಕಾರ್ಯಕ್ರಮವು ಫಲಾನುಭವಿಗಳು ಮತ್ತು ಅವರ ಕುಟುಂಬಗಳ ಮೇಲಿನ ಚಿಕಿತ್ಸಾ ವೆಚ್ಚ ಹಾಗೂ ಪ್ರಯಾಣದ ಹೊರೆಯನ್ನೂ ಕಡಿಮೆ ಮಾಡುತ್ತಿದೆ.
ಕಾರ್ಯಕ್ರಮದಲ್ಲಿಜೆ ಎಸ್ ಡಬ್ಲೂ ಮಾನವ ಸಂಪನ್ಮೂಲ ವ್ಯವಹಾರ ಸಹಭಾಗಿತ್ವದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಮಯೂರೆಶ್ ಬಾಪಟ್; ಜೆ ಎಸ್ ಡಬ್ಲೂ ಫೌಂಡೇಶನ್ನ ಆರೋಗ್ಯ ಮತ್ತು ಪೌಷ್ಟಿಕಾಂಶ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಡಾ. ಆಶೀಶ್ ಜೈನ್;ಜೆ ಎಸ್ ಡಬ್ಲೂ ಎನರ್ಜಿ ಮಾನವ ಸಂಪನ್ಮೂಲ ಅಧಿಕಾರಿ ಕಿರಣ್ ಗೋವಿಂದ್ ಹಾಗೂ ಶ್ರೀಕಾಂತ ಹೆಗ್ಡೆ, ಸಂಡೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ. ಹರೀಶ್; ಶ್ರೀ ಭಾರತಿ ಪಳನಿಸಾಮಿ ಮುಖ್ಯಸ್ಥರು ಜೆಎಸ್ಡಬ್ಲ್ಯೂ ಫೌಂಡೇಷನ್ ವಿಜಯನಗರ, ಜೆ ಎಸ್ ಡಬ್ಲೂ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಂಚಾರಿ ಆರೋಗ್ಯ ಘಟಕಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್