
ಬಳ್ಳಾರಿ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿಗೆ ಹಿಂದುಳಿದ ವರ್ಗಗಳ ಅರ್ಹ ಫಲಾನುಭವಿಗಳಿಂದ ವಿವಿಧ ಕಲ್ಯಾಣ ಯೋಜನೆಗಳಡಿ ಸೌಲಭ್ಯ ಪಡೆಯಲು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಟಿ.ಹೊನ್ನೂರಪ್ಪ ಅವರು ತಿಳಿಸಿದ್ದಾರೆ.
*ಯೋಜನೆಗಳ ವಿವರ ಹಾಗೂ ಸೌಲಭ್ಯಗಳು:*
*ಡಿ. ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ:*
ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ ಮತ್ತು ಸೇವಾ ವಲಯದ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಠ ರೂ.2 ಲಕ್ಷದವರೆಗೆ ನೆರವು ನೀಡಲಾಗುತ್ತದೆ. ರೂ.1 ಲಕ್ಷದವರೆಗಿನ ಸಾಲಕ್ಕೆ ಶೇ. 20ರಷ್ಟು (ಗರಿಷ್ಠ ರೂ.20,000) ಸಹಾಯಧನ ಹಾಗೂ ರೂ.1.01 ಲಕ್ಷದಿಂದ ರೂ.2 ಲಕ್ಷದವರೆಗೆ ಶೇ. 15ರಷ್ಟು (ಗರಿಷ್ಠ ರೂ.30,000) ಸಹಾಯಧನ ಲಭ್ಯವಿದ್ದು, ಉಳಿಕೆ ಮೊತ್ತವನ್ನು ಶೇ. 4ರ ರಿಯಾಯಿತಿ ಬಡ್ಡಿದರದಲ್ಲಿ ಒದಗಿಸಲಾಗುತ್ತದೆ. 18 ರಿಂದ 55 ವರ್ಷದೊಳಗಿನವರು ಅರ್ಹರು.
*ಗಂಗಾ ಕಲ್ಯಾಣ ನೀರಾವರಿ ಯೋಜನೆ:*
ಸಣ್ಣ ಮತ್ತು ಅತಿಸಣ್ಣ ರೈತರ ಕನಿಷ್ಠ 2 ಎಕರೆಯಿಂದ ಗರಿಷ್ಠ 5 ಎಕರೆವರೆಗಿನ ಜಮೀನಿಗೆ ವೈಯಕ್ತಿಕ ಕೊಳವೆಬಾವಿ ಸೌಲಭ್ಯ ಕಲ್ಪಿಸಲಾಗುತ್ತದೆ. ಘಟಕ ವೆಚ್ಚ ರೂ.3.75 ಲಕ್ಷಗಳಾಗಿದ್ದು, ಇದರಲ್ಲಿ ರೂ.75,000 ಎಸ್ಕಾಂಗಳಿಗೆ ವಿದ್ಯುದ್ಧೀಕರಣ ವೆಚ್ಚವಾಗಿ ಪಾವತಿಯಾಗುತ್ತದೆ. ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ಶೇ. 4ರ ಬಡ್ಡಿದರದಲ್ಲಿ ರೂ.50,000 ಸಾಲ ನೀಡಲಾಗುತ್ತದೆ.
*ಅರಿವು ಶೈಕ್ಷಣಿಕ ಸಾಲ ಯೋಜನೆ:*
ಸಿಇಟಿ/ನೀಟ್ ಮೂಲಕ ವೃತ್ತಿಪರ ಕೋರ್ಸ್ಗಳಿಗೆ (ವೈದ್ಯಕೀಯ, ಎಂಜಿನಿಯರಿ0ಗ್ ಸೇರಿ 28 ಕೋರ್ಸ್ಗಳು) ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1 ಲಕ್ಷದಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ.4 ರಿಂದ ರೂ.5 ಲಕ್ಷದವರೆಗೆ ಶೇ. 2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷದೊಳಗಿರಬೇಕು. ನವೀಕರಣ ಬಯಸುವ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
*ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ:*
ಕ್ಯೂಎಸ್ ವರ್ಲ್ಡ್ ರ್ಯಾಂಕಿ0ಗ್ 1000ರೊಳಗಿನ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ, ಪಿಎಚ್.ಡಿ ಅಥವಾ ಪೋಸ್ಟ್ ಡಾಕ್ಟರಲ್ ವ್ಯಾಸಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ ರೂ.25 ಲಕ್ಷ ಹಾಗೂ ಪೂರ್ಣ ಕೋರ್ಸ್ಗೆ ಒಟ್ಟು ರೂ.50 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಕುಟುಂಬದ ಆದಾಯ ರೂ.15 ಲಕ್ಷದ ಮಿತಿಯಲ್ಲಿರಬೇಕು ಮತ್ತು ವಿದ್ಯಾರ್ಥಿಯು ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.
*ಸ್ವಾವಲಂಬಿ ಸಾರಥಿ ಯೋಜನೆ:*
ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಸಲು ಬ್ಯಾಂಕ್ ಸಾಲಕ್ಕೆ ಶೇ. 50ರಷ್ಟು (ಗರಿಷ್ಠ ರೂ.3 ಲಕ್ಷ) ಸಹಾಯಧನ ನೀಡಲಾಗುವುದು. ಅರ್ಜಿದಾರರು 21 ರಿಂದ 45 ವರ್ಷದೊಳಗಿರಬೇಕು ಮತ್ತು ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
*ಹೊಲಿಗೆ ಯಂತ್ರ ವಿತರಣೆ ಯೋಜನೆ:*
ಹಿಂದುಳಿದ ವರ್ಗಗಳ ಬಡ ಕುಟುಂಬದ 18 ರಿಂದ 55 ವರ್ಷ ವಯೋಮಿತಿಯ ಮಹಿಳೆಯರು/ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತದೆ.
*ಅರ್ಹತೆ ಮತ್ತು ಷರತ್ತುಗಳು:*
ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಒಕ್ಕಲಿಗ, ಲಿಂಗಾಯತ, ಮರಾಠ, ತಿಗಳ, ಗಾಣಿಗ, ಕುಂಬಾರ, ಹಡಪದ, ಕೊಡವ ಮತ್ತು ಈಡಿಗ ಸೇರಿದಂತೆ ಪ್ರತ್ಯೇಕ ನಿಗಮಗಳನ್ನು ಹೊಂದಿರುವ ಸಮುದಾಯಗಳನ್ನು ಹೊರತುಪಡಿಸಿ ಉಳಿದ ಸಮುದಾಯಗಳಿಗೆ ಈ ಯೋಜನೆಗಳು ಅನ್ವಯಿಸುತ್ತವೆ).
ಸಾಮಾನ್ಯ ಯೋಜನೆಗಳಿಗೆ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ಗರಿಷ್ಠ ರೂ.98,000 ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000 ಮಿತಿಯೊಳಗೆ ಇರಬೇಕು.
ಅರ್ಜಿದಾರರ ಆಧಾರ್ ಕಾರ್ಡ್ನಲ್ಲಿರುವ ಹೆಸರು, ಜಾತಿ-ಆದಾಯ ಪ್ರಮಾಣಪತ್ರ ಹಾಗೂ ಬ್ಯಾಂಕ್ ಪಾಸ್ಬುಕ್ನಲ್ಲಿರುವ ಹೆಸರುಗಳು ಸಂಪೂರ್ಣ ಹೊಂದಾಣಿಕೆಯಾಗಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಪ್ರಯೋಜನ ಪಡೆದ ಕುಟುಂಬದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಅರ್ಹರು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ: 08392-267038 ಗೆ ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಟಿ.ಹೊನ್ನೂರಪ್ಪ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್