
ಗದಗ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್: ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಕಳ್ಳತನ ಪ್ರಕರಣದಲ್ಲಿ ಪೊಲೀಸರು ಸ್ವತ್ತು ಪತ್ತೆಹಚ್ಚಿದ್ದರೂ ಕುಟುಂಬಕ್ಕೆ ಹಸ್ತಾಂತರಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಳಗುಂದ ಮೂಲದ ತುಳಜಾಬಾಯಿ ಹಾಗೂ ವಿನಾಯಕ, ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. 2024ರ ಫೆಬ್ರವರಿ 28ರಂದು ಮುಳಗುಂದ ರಸ್ತೆಯ ಅಂಜುಮನ್ ಕಾಲೇಜು ಎದುರಿನ ಮನೆಯೊಂದಕ್ಕೆ ಹಾಡಹಗಲೇ ಕಳ್ಳರು ನುಗ್ಗಿ ಸುಮಾರು ಒಂದು ಕೆಜಿ ಚಿನ್ನ, ಒಂದೂವರೆ ಕೆಜಿ ಬೆಳ್ಳಿ ಹಾಗೂ ₹36 ಲಕ್ಷ ನಗದು ಕದ್ದೊಯ್ದಿದ್ದರು ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿತ್ತು. ಕೆಲ ದಿನಗಳ ಬಳಿಕ ಪೊಲೀಸರು ಕಳ್ಳತನವಾದ ಸ್ವತ್ತು ಪತ್ತೆಯಾಗಿದೆ ಎಂದು ತಿಳಿಸಿ, ಶೀಘ್ರದಲ್ಲೇ ಹಸ್ತಾಂತರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಎರಡು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಸ್ವತ್ತು ಮರಳಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳ್ಳತನವಾದ ಆಭರಣಗಳ ಖರೀದಿ ಬಿಲ್‌ಗಳು ಹಾಗೂ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ನಡುವೆ ಸ್ವತ್ತು ಪತ್ತೆಯಾಗಿಲ್ಲ ಎಂದು ನ್ಯಾಯಾಲಯಕ್ಕೆ ಸಿ-ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆ ವರದಿಗೆ ತಮ್ಮ ನಕಲಿ ಸಹಿ ಬಳಸಲಾಗಿದೆ ಎಂಬ ಗಂಭೀರ ಆರೋಪವನ್ನೂ ತುಳಜಾಬಾಯಿ ಮಾಡಿದ್ದಾರೆ.
ಈ ಕುರಿತು ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ನ್ಯಾಯ ದೊರಕಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಪಿ ಬಳಿಕ ಗೃಹ ಸಚಿವರ ಮೊರೆ ಹೋಗಿರುವ ಅವರು, ಪ್ರಕರಣದ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಕಳ್ಳತನವಾದ ಸ್ವತ್ತನ್ನು ವಾಪಸ್ ನೀಡಬೇಕು. ತನಿಖೆಯಲ್ಲಿ ಲೋಪವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ಕೆಜಿ ಚಿನ್ನ, ಒಂದೂವರೆ ಕೆಜಿ ಬೆಳ್ಳಿ ಹಾಗೂ ₹36 ಲಕ್ಷ ನಗದು ಸೇರಿ ಕಳ್ಳತನವಾದ ಸ್ವತ್ತಿನ ಇಂದಿನ ಮೌಲ್ಯ ಸುಮಾರು ₹2 ಕೋಟಿ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪೊಲೀಸರ ವಿರುದ್ಧದ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದ್ದು, ಸ್ವತ್ತು ನಿಜವಾಗಿಯೂ ಪತ್ತೆಯಾಗಿತ್ತೇ, ಪತ್ತೆಯಾಗಿದ್ದರೆ ಅದು ಎಲ್ಲಿದೆ ಮತ್ತು ಸಿ-ರಿಪೋರ್ಟ್‌ಗೆ ನಕಲಿ ಸಹಿ ಮಾಡಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP