
ಬೆಂಗಳೂರು, 27 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಗದಗದ ಕೆಆರ್‌ಐಡಿಎಲ್ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಫರ್ವೇಜ್ ಧಾರವಾಡ ಅವರು ಅನುದಾನ ಬಿಡುಗಡೆಯಾಗದೆ, ಗುತ್ತಿಗೆದಾರರ ಒತ್ತಡ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವುದು ಆತಂಕಕಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಈ ಪ್ರಕರಣಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ನಡೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ರಾಜ್ಯ ಸರ್ಕಾರದ ಆಡಳಿತಾತ್ಮಕ ವೈಫಲ್ಯ ಹಾಗೂ ಆರ್ಥಿಕ ಪರಿಸ್ಥಿತಿಯಿಂದಾಗಿ ಹತಾಶೆಯ ಹಂತಕ್ಕೆ ತಲುಪಿರುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಕಾಮಗಾರಿ ಪೂರ್ಣಗೊಂಡಿದ್ದರೂ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡದೆ ಅಧಿಕಾರಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ. ‘ಶತಕದ ಪಥ, ಪ್ರಗತಿಯ ರಥ’ ಎಂದು ಸರ್ಕಾರ ತನ್ನನ್ನು ತಾನೇ ಹೊಗಳಿಕೊಳ್ಳಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ನೀಡಿದೆ. ಆದರೆ ವಾಸ್ತವ ಪರಿಸ್ಥಿತಿಯನ್ನು ಸರ್ಕಾರದ ಅಧಿಕಾರಿಯೇ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಇದು ಕೇವಲ ಸರ್ಕಾರಿ ಅಧಿಕಾರಿಯೊಬ್ಬರ ನಾಪತ್ತೆಯ ಪ್ರಕರಣವಲ್ಲ. ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿರುವುದಕ್ಕೆ ಜ್ವಲಂತ ಸಾಕ್ಷಿ ಎಂದು ವಿಜಯೇಂದ್ರ ಹೇಳಿದ್ದಾರೆ. ಕಮಿಷನ್ ದಂಧೆ ಹಾಗೂ ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿ ಅನುದಾನವನ್ನು ತಡೆಹಿಡಿಯಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅಧಿಕಾರಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡ ಮತ್ತು ಕಿರುಕುಳಗಳಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಆರೋಪಿಸಿರುವ ವಿಜಯೇಂದ್ರ, ನಾಪತ್ತೆಯಾಗಿರುವ ಅಧಿಕಾರಿಯನ್ನು ತಕ್ಷಣ ಪತ್ತೆಹಚ್ಚಿ ಅವರ ಕುಟುಂಬಕ್ಕೆ ಧೈರ್ಯ ತುಂಬಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
ಗದಗ ಉಪವಿಭಾಗ ಸೇರಿದಂತೆ ಬಾಕಿ ಇರುವ ಎಲ್ಲಾ ಅನುದಾನವನ್ನು ಬಿಡುಗಡೆಗೊಳಿಸಬೇಕು. ರಾಜ್ಯದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೆಮ್ಮದಿಯಿಂದ ಕಾರ್ಯನಿರ್ವಹಿಸುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ನಿಮ್ಮ ಸರ್ಕಾರದ ಪ್ರಗತಿಯ ರಥಕ್ಕೆ ಗಾಲಿಯೇ ಇಲ್ಲ. ಮುನ್ನಡೆಯುವುದಿರಲಿ, ಮೊದಲು ಕುಸಿಯದಂತೆ ತಡೆಯಿರಿ. ಅಧಿಕಾರಿಗಳನ್ನು ಬಲಿಪಶು ಮಾಡಬೇಡಿ” ಎಂದು ವಿಜಯೇಂದ್ರ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.