
ಬೆಂಗಳೂರು, 27 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಕನ್ನಡ ಚಿತ್ರರಂಗ ಹಾಗೂ ಸಂಗೀತ ಲೋಕದಲ್ಲಿ ‘ಕನ್ನಡದ ಶಿವಮಣಿ’ ಎಂದೇ ಖ್ಯಾತರಾಗಿದ್ದ ಹಿರಿಯ ಡ್ರಮ್ಮರ್ ದೇವ (64) ಅವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ದೇವ ಅವರಿಗೆ ಗ್ಯಾಂಗ್ರೀನ್ ಬಾಧಿಸಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಬಲಗಾಲನ್ನು ತೆರವುಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಅವರಿಗೆ ಸ್ಟ್ರೋಕ್ ಕೂಡ ಎದುರಾಗಿದ್ದು, ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ವೈದ್ಯರ ಸಲಹೆಯಂತೆ ಮನೆಯಲ್ಲೇ ನಿರಂತರ ವೈದ್ಯಕೀಯ ಆರೈಕೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಂಗೀತ ಕ್ಷೇತ್ರದಲ್ಲಿ ಆರಂಭದಲ್ಲಿ ವಾದ್ಯೋಪಕರಣಗಳ ನಿರ್ವಹಣೆಯ ಕೆಲಸ ಮಾಡುತ್ತಿದ್ದ ದೇವ, ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಖ್ಯಾತ ಡ್ರಮ್ಮರ್ ಆಗಿ ಗುರುತಿಸಿಕೊಂಡಿದ್ದರು.
ಇಳಯರಾಜ, ಹಂಸಲೇಖ ಹಾಗೂ ಸಾಧು ಕೋಕಿಲ ಸೇರಿದಂತೆ ಹಲವು ಪ್ರಮುಖ ಸಂಗೀತ ನಿರ್ದೇಶಕರ ವಾದ್ಯವೃಂದಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು.
ಕೆಲವು ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದ ದೇವ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್ಸಿಬಿ ಪಂದ್ಯಗಳ ವೇಳೆ ಲೈವ್ ಡ್ರಮ್ ಬೀಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಅವರ ನಿಧನಕ್ಕೆ ಚಿತ್ರರಂಗ, ಸಂಗೀತ ಕ್ಷೇತ್ರ ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
“ಕನ್ನಡದ ಶಿವಮಣಿ ಎಂದೇ ಗುರುತಿಸಿಕೊಂಡಿದ್ದ ದೇವ ಅವರ ಅಗಲಿಕೆ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಸಂಗೀತ ಸೇವೆ ಹಾಗೂ ವಿಶಿಷ್ಟ ಡ್ರಮ್ ವಾದನವನ್ನು ಅಭಿಮಾನಿಗಳು ಸದಾ ಸ್ಮರಿಸಲಿದ್ದಾರೆ” ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R