
ಬೆಂಗಳೂರು, 27 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಕನ್ನಡ ರಂಗಭೂಮಿಯ ಜನಪ್ರಿಯ ‘ಮುಖ್ಯಮಂತ್ರಿ’ ನಾಟಕ 900ನೇ ಪ್ರದರ್ಶನದ ಮೈಲುಗಲ್ಲು ತಲುಪಿದೆ. ಸೆ.26ರಂದು ರಾತ್ರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 900ನೇ ವಿಶೇಷ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ರಂಜಿತ್ ಕಪೂರ್ ಅವರ ಮೂಲ ನಾಟಕವನ್ನು ಬಿ.ಎಸ್. ಲೋಹಿತಾಶ್ವ ಕನ್ನಡಕ್ಕೆ ರೂಪಾಂತರಿಸಿದ್ದು, ಬಿ.ವಿ. ರಾಜಾರಾಂ ನಿರ್ದೇಶನ ಮಾಡಿದ್ದಾರೆ. ‘ಮುಖ್ಯಮಂತ್ರಿ’ ಪಾತ್ರದ ಮೂಲಕವೇ ಜನಪ್ರಿಯರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು 900 ಪ್ರದರ್ಶನಗಳಲ್ಲೂ ಈ ಪಾತ್ರವನ್ನು ನಿರ್ವಹಿಸಿರುವುದು ನಾಟಕದ ವಿಶೇಷವಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಂ. ವೀರಪ್ಪ ಮೊಯಿಲಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ಗಣ್ಯರು, ಕಲಾವಿದರು ಹಾಗೂ ರಂಗಾಸಕ್ತರು ಪಾಲ್ಗೊಂಡಿದ್ದರು.
“900 ಪ್ರದರ್ಶನಗಳಲ್ಲೂ ನಾನೇ ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರೂ ನಾಟಕವನ್ನು ಬಿಟ್ಟಿಲ್ಲ. ಪ್ರತೀ ತಿಂಗಳು ಒಂದು ಪ್ರದರ್ಶನದಂತೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದೇನೆ. 900ನೇ ಪ್ರದರ್ಶನವನ್ನು ವಿಶೇಷವಾಗಿ ಆಚರಿಸಬೇಕು ಎಂಬುದು ನನ್ನ ಆಶಯವಾಗಿತ್ತು” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ನಾಟಕ ವೀಕ್ಷಿಸಿ ಮುಖ್ಯಮಂತ್ರಿ ಚಂದ್ರು ಅವರ ದೀರ್ಘಕಾಲದ ರಂಗಸೇವೆ ಹಾಗೂ ಅಭಿನಯವನ್ನು ಶ್ಲಾಘಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R