
ಕೋಲಾರ, 26 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್ : ಬೇತಮಂಗಲ ಪೊಲೀಸರು ಮನೆ ಕಳವು ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ರೂ.೧೦,೮೦,೦೦೦/- ಮೌಲ್ಯದ ೭೨ ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾ.೦೧ ರಂದು ಸಿದ್ದಾರೆಡ್ಡಿದಿನ್ನೆ ಗ್ರಾಮದ ನಾರಾಯಣಸ್ವಾಮಿ ರವರು ತಮ್ಮ ಮನೆಯಲ್ಲಿ ೪೦ ಗ್ರಾಂ ಚಿನ್ನದ ಒಡವೆಗಳು ಮತ್ತು ನಗದು ಹಣ ಕಳ್ಳತನವಾಗಿರುವ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆಮಾಡಲು ಬೇತಮಂಗಲ ವೃತ್ತ ಕಛೇರಿ ಸಿಪಿಐ ಜಗದೀಶ್ ಎಸ್.ಆರ್ ರವರ ನೇತೃತ್ವದಲ್ಲಿ ಪಿಎಸ್ಐ ಸಂಗಮೇಶ್ ಕೋಲ್ಹಾರ್ ಮತ್ತು ಸಿಬ್ಬಂದಿಯವರನ್ನೊಳಗೊಂಡಂತೆ ವಿಶೇಷ ಅಪರಾಧ ಪತ್ತೆ ದಳವನ್ನು ರಚನೆ ಮಾಡಲಾಗಿತ್ತು.
ಕಾರ್ಯಾಚರಣೆ ನಡೆಸಿದ ಪೊಲೀಸರು ಕೆ.ಜಿ.ಎಫ್ ತಾಲ್ಲೂಕಿನ ಆಂಡ್ರಸನ್ಪೇಟೆಯ ವಾಸಿ ಆರೋಪಿ ಕಿರಣ್.ಆರ್ ಎಂಬಾತನನ್ನು ಬಂಧಿಸಿದರು. ಆರೋಪಿಯು ತಾನು ಸಿದ್ದಾರೆಡ್ಡಿದಿನ್ನೆ ಗ್ರಾಮದ ಮನೆಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಜೊತೆಗೆ ತಾನು ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಸಂಗನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ತಾಳಿಬೊಟ್ಟುಗಳನ್ನು ಹಾಗೂ ರಾಬರ್ಟ್ಸನ್ಪೇಟೆ ಸ್ವರ್ಣನಗರದ ಮನೆಯೊಂದರಲ್ಲಿ ಚಿನ್ನದ ಆಭರಣಗಳನ್ನು ಕಳುವು ಮಾಡಿರುವುದಾಗಿ ತಿಳಿಸಿದ ಆರೋಪಿಯಿಂದ ಒಟ್ಟು ರೂ.೧೦,೮೦,೦೦೦/- ಮೌಲ್ಯದ ೭೨ ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಲಕ್ಷಯ್ಯ. ವಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಬೇತಮಂಗಲ ವೃತ್ತ ಕಛೇರಿ ಸಿಪಿಐ ಜಗದೀಶ್ ಎಸ್.ಆರ್ ಪಿ.ಎಸ್.ಐ ಸಂಗಮೇಶ್ ಕೋಲ್ಹಾರ್ ಮತ್ತು ಸಿಬ್ಬಂದಿಯವರಾದ ವೇಣುಗೋಪಾಲ್, ಅನಿಲ್ ಕುಮಾರ್, ಧನಸಿಂಗ್ ಲಮಾಣಿ ರವರ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಪ್ರಶಂಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್