
ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಬೆಂಗಳೂರಿನ ವಿವಿಧೆಡೆ ಪೋಸ್ಟರ್ ಅಭಿಯಾನ ನಡೆಸಲಾಗಿದೆ. “RESIGN GYANESH KUMAR – ರಾಜೀನಾಮೆ ನೀಡಿ ಜ್ಞಾನೇಶ್ ಕುಮಾರ್” ಎಂಬ ಬರಹದ ಪೋಸ್ಟರ್ಗಳು ನಗರದ ಗಮನ ಸೆಳೆಯುತ್ತಿವೆ.
ವಿಶೇಷ ತೀವ್ರ ಪರಿಷ್ಕರಣೆ ಕುರಿತು ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಅಭಿಯಾನ ನಡೆಸಲಾಗಿದೆ. ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಮುನ್ನ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ತಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ್ದಾರೆಯೇ ಅಥವಾ ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆಯೇ ಎಂಬ ಪ್ರಶ್ನೆಯನ್ನು ಪೋಸ್ಟರ್ಗಳ ಮೂಲಕ ಕೇಳಲಾಗಿದೆ.
ಪೋಸ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜ್ಞಾನೇಶ್ ಕುಮಾರ್ ಅವರೊಂದಿಗೆ ಚರ್ಚಿಸುತ್ತಿರುವ ರೀತಿಯ ಚಿತ್ರವನ್ನು ಬಳಸಲಾಗಿದೆ.
ಎಸ್ಐಆರ್ ಗೆ ಸಂಬಂಧಿಸಿದ ನಿರ್ಧಾರಗಳ ಸಂದರ್ಭದಲ್ಲಿ ಯಾರೊಂದಿಗೆ ಸಮಾಲೋಚನೆ ನಡೆಸಲಾಯಿತು ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಅಭಿಯಾನಕಾರರು ಒತ್ತಾಯಿಸಿದ್ದಾರೆ.
“ಎಸ್ಐಆರ್ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕು. ಚುನಾವಣಾ ಆಯೋಗದೊಳಗೆ ವರದಿಯಾಗಿರುವ ಆಕ್ಷೇಪಗಳು ಹಾಗೂ ನಿರ್ಧಾರ ಕೈಗೊಂಡ ಪ್ರಕ್ರಿಯೆಯ ಕುರಿತು ಸತ್ಯವನ್ನು ಬಹಿರಂಗಪಡಿಸಬೇಕು” ಎಂದು ಅಭಿಯಾನಕಾರರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R