ಜಿಬಿಎಗೆ ವೈದ್ಯಾಧಿಕಾರಿಗಳ ನಿಯೋಜನೆ ರದ್ದುಗೊಳಿಸಲು ಆಗ್ರಹ
ಕಾನೂನುಬಾಹಿರ ಎರವಲು ಸೇವೆ ಆರೋಪ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಅಧಿಕಾರಿ–ನೌಕರರ ಸಂಘ ಪತ್ರ
gBA-doctor-deputation-cancellation-demand-illegal-deputation-allegation


ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಾಧಿಕಾರಿಗಳನ್ನು ಎರವಲು ಸೇವೆ ಆಧಾರದ ಮೇಲೆ ನಿಯೋಜಿಸುವ ಕ್ರಮವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಜಿಬಿಎ–ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ಈ ಕುರಿತು ಸಂಘದ ಅಧ್ಯಕ್ಷ ಎ. ಅಮೃತ್ರಾಜ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಿಯಮಗಳನ್ನು ಪಾಲಿಸದೆ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶೇ.75 ಮುಂಬಡ್ತಿಗೆ ಅವಕಾಶ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ನಿಯಮಾವಳಿಯನ್ವಯ ಜಿಬಿಎ ವ್ಯಾಪ್ತಿಯ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ ಶೇ.75ರ ಅನುಪಾತದಲ್ಲಿ ಮುಂಬಡ್ತಿ ನೀಡಲು ಅವಕಾಶವಿದೆ.

ಸೇವಾ ಹಿರಿತನದ ಜತೆಗೆ ಎಂಟಿ ಕಮ್ಯುನಿಟಿ ಮೆಡಿಸಿನ್, ಎಂಪಿಎಚ್ ಅಥವಾ ಡಿಪಿಎಚ್ ಪದವಿ ಹೊಂದಿರುವವರಿಗೆ ನಿಯಮಾನುಸಾರ ಮುಂಬಡ್ತಿ ನೀಡಬಹುದಾಗಿದೆ ಎಂದು ಸಂಘ ತಿಳಿಸಿದೆ.

ಆದರೆ, ಆರೋಗ್ಯ ಇಲಾಖೆಯಿಂದ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಆರೋಗ್ಯ ವೈದ್ಯಾಧಿಕಾರಿಗಳನ್ನು ಎರವಲು ಸೇವೆ ಆಧಾರದ ಮೇಲೆ ನಿಯೋಜಿಸುವ ಕ್ರಮವು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸಂಘ ಆರೋಪಿಸಿದೆ.

“ನಿಯಮಾನುಸಾರ ನೇಮಕಾತಿ ನಡೆಯಲಿ”:“ಜಿಬಿಎ ವ್ಯಾಪ್ತಿಯ ಪಾಲಿಕೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅರ್ಹ ವೈದ್ಯಾಧಿಕಾರಿಗಳಿಗೆ ನಿಯಮಾನುಸಾರ ಮುಂಬಡ್ತಿ ನೀಡುವ ಅವಕಾಶವಿದೆ.

ಹೀಗಿರುವಾಗ ಆರೋಗ್ಯ ಇಲಾಖೆಯಿಂದ ಎರವಲು ಸೇವೆ ಆಧಾರದ ಮೇಲೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವ ಅಗತ್ಯವಿಲ್ಲ. ಇಂತಹ ನಿಯೋಜನೆಗಳನ್ನು ಕೂಡಲೇ ರದ್ದುಗೊಳಿಸಿ, ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಕ್ರಮ ಕೈಗೊಳ್ಳಬೇಕು” ಎಂದು ಎ. ಅಮೃತ್ರಾಜ್ ಒತ್ತಾಯಿಸಿದ್ದಾರೆ.

ವೈದ್ಯಾಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದಂತೆ ಇರುವ ನಿಯಮಗಳು ಹಾಗೂ ಸೇವಾ ಹಕ್ಕುಗಳನ್ನು ಪರಿಗಣಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ಸಂಘವು ಆರೋಗ್ಯ ಇಲಾಖೆಯನ್ನು ಆಗ್ರಹಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande