
ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಐದು ದಿನಗಳ ಕೆಲಸದ ವಾರ ಜಾರಿಗೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ಸೆ.26ರಿಂದ 30ರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕ್ಗಳ ಶಾಖಾ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಸೆ.26 ನಾಲ್ಕನೇ ಶನಿವಾರವಾಗಿರುವುದರಿಂದ ಬ್ಯಾಂಕ್ಗಳಿಗೆ ಸಾಮಾನ್ಯ ರಜೆ ಇರಲಿದೆ. ಸೆ.27 ಭಾನುವಾರವಾದರೂ ಮುಷ್ಕರಕ್ಕೂ ಮುನ್ನ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಾರ್ವಜನಿಕ ವಲಯದ ಬ್ಯಾಂಕ್ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೂಡ ಶಾಖೆಗಳು, ಕಚೇರಿಗಳು, ಎಟಿಎಂ-ಲಿಂಕ್ಡ್ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್ಗಳನ್ನು ಸೆ.27ರಂದು ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.
ಆದರೆ ಸೆ.28, 29 ಮತ್ತು 30ರಂದು ಮುಷ್ಕರ ನಡೆದರೆ ಬ್ಯಾಂಕ್ ಶಾಖೆಗಳಲ್ಲಿ ನೇರವಾಗಿ ಪಡೆಯಬೇಕಾದ ಸೇವೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಚೆಕ್ ಕ್ಲಿಯರಿಂಗ್, ದಾಖಲೆ ಆಧಾರಿತ ಸೇವೆಗಳು ಹಾಗೂ ಸಿಬ್ಬಂದಿಯ ನೆರವು ಅಗತ್ಯವಿರುವ ಹಲವು ಬ್ಯಾಂಕಿಂಗ್ ವ್ಯವಹಾರಗಳು ವಿಳಂಬವಾಗಬಹುದು.
ಐದು ದಿನಗಳ ಕೆಲಸದ ವಾರಕ್ಕೆ ಒತ್ತಾಯ:ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕ್ಗಳು ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ.
ಪ್ರಸ್ತುತ ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ಗಳಿಗೆ ರಜೆ ಇದೆ. ಎಲ್ಲ ಶನಿವಾರಗಳನ್ನೂ ರಜೆಯನ್ನಾಗಿ ಮಾಡಿ ಐದು ದಿನಗಳ ಕೆಲಸದ ವಾರ ಜಾರಿಗೆ ತರಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
2024ರ ವೇತನ ಪರಿಷ್ಕರಣೆ ಒಪ್ಪಂದದ ಸಂದರ್ಭದಲ್ಲೇ ಈ ಬೇಡಿಕೆಗೆ ಒಪ್ಪಿಗೆ ದೊರೆತಿದ್ದರೂ, ಇದುವರೆಗೆ ಅನುಷ್ಠಾನಗೊಂಡಿಲ್ಲ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಹೇಳಿದೆ. ಪಿಂಚಣಿ ಸೇರಿದಂತೆ ವಿವಿಧ ಸೇವಾ ಸಂಬಂಧಿತ ಬೇಡಿಕೆಗಳನ್ನೂ ಸಂಘಟನೆಗಳು ಮುಂದಿಟ್ಟಿವೆ.
ಇದೇ ಬೇಡಿಕೆಗಳಿಗಾಗಿ ಬ್ಯಾಂಕ್ ನೌಕರರು ಸೆಪ್ಟೆಂಬರ್ 11ರಂದು ದೇಶವ್ಯಾಪಿ ಒಂದು ದಿನದ ಮುಷ್ಕರ ನಡೆಸಿದ್ದರು. ಇದೀಗ ಮತ್ತೆ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸೆ.22ರಂದು ನಡೆದ ಸಮನ್ವಯ ಸಭೆಯಲ್ಲೂ ಐದು ದಿನಗಳ ಕೆಲಸದ ವಾರದ ಬೇಡಿಕೆಗೆ ಸ್ಪಷ್ಟ ಪ್ರಗತಿ ಕಂಡುಬರದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲು ನಿರ್ಧರಿಸಲಾಗಿದೆ ಎಂದುಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ತಿಳಿಸಿದೆ.
ಮುಷ್ಕರವನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್ ಆಡಳಿತ ಮಂಡಳಿಗಳು ಮನವಿ ಮಾಡಿದ್ದರೂ, ಬೇಡಿಕೆಗಳ ಕುರಿತು ಸ್ಪಷ್ಟ ಹಾಗೂ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿಲ್ಲ ಎಂದು ಸಂಘಟನೆಗಳು ಹೇಳಿವೆ.
ಮುಷ್ಕರದಿಂದ ಮುಖ್ಯವಾಗಿ ಬ್ಯಾಂಕ್ ಶಾಖೆಗಳಲ್ಲಿ ನಡೆಯುವ ನೇರ ಸೇವೆಗಳು ಬಾಧಿತವಾಗುವ ಸಾಧ್ಯತೆ ಇದೆ. ಆದರೆ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಸೇರಿದಂತೆ ಡಿಜಿಟಲ್ ಪಾವತಿ ಸೇವೆಗಳು ಸಾಮಾನ್ಯವಾಗಿ ಮುಂದುವರಿಯುವ ನಿರೀಕ್ಷೆಯಿದೆ. ಎಟಿಎಂ ಸೇವೆಗಳನ್ನೂ ಸಾಧ್ಯವಾದಷ್ಟು ನಿರಂತರವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹೀಗಾಗಿ ಗ್ರಾಹಕರು ಮುಷ್ಕರಕ್ಕೂ ಮುನ್ನ ಶಾಖೆಗೆ ತೆರಳಿ ಅಗತ್ಯವಿರುವ ವ್ಯವಹಾರಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಬ್ಯಾಂಕ್ಗಳು ಸಲಹೆ ನೀಡಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R