
ಮೈಸೂರು, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಅರಮನೆ ಆವರಣದಲ್ಲಿ ಭರದಿಂದ ಸಾಗುತ್ತಿದ್ದು, ಜಂಬೂಸವಾರಿಯ ಪ್ರಮುಖ ಅಂಗವಾಗಿರುವ 21 ಕುಶಾಲತೋಪುಗಳ ತಾಲೀಮಿಗೂ ಮುನ್ನ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.
ಅರಮನೆ ಆವರಣದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪೊಲೀಸರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ದುರ್ಗಾದೇವಿ, ಮಹಾಲಕ್ಷ್ಮೀ ದೇವಿ ಹಾಗೂ ಮೃತ್ಯುಂಜಯ ದೇವರನ್ನು ಪ್ರಾರ್ಥಿಸಿ ಧೂಪ, ದೀಪ ಅರ್ಪಿಸಲಾಯಿತು.
ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಬೇಕು ಹಾಗೂ ಕುಶಾಲತೋಪುಗಳ ತಾಲೀಮು ಸುರಕ್ಷಿತವಾಗಿ ನೆರವೇರಬೇಕು ಎಂಬ ಉದ್ದೇಶದಿಂದ ಪೂಜೆ ಸಲ್ಲಿಸಲಾಯಿತು.
ಜಂಬೂಸವಾರಿ ದಿನ ರಾಷ್ಟ್ರಗೀತೆ ನುಡಿಸುವ ಸಂದರ್ಭದಲ್ಲಿ 21 ಕುಶಾಲತೋಪುಗಳನ್ನು ಗೌರವಪೂರ್ವಕವಾಗಿ ಸಿಡಿಸುವುದು ದಸರಾ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ಇದಕ್ಕಾಗಿ ಮೂರು ಹಂತಗಳಲ್ಲಿ ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
“ದಸರಾ ಮಹೋತ್ಸವದ ಸಂದರ್ಭದಲ್ಲಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮುಗಳನ್ನು ನಿಯಮಾನುಸಾರ ಹಾಗೂ ಸುರಕ್ಷಿತವಾಗಿ ನಡೆಸಲಾಗುವುದು.
ತಾಲೀಮು ಮತ್ತು ಜಂಬೂಸವಾರಿ ಯಶಸ್ವಿಯಾಗಿ ನಡೆಯಲಿ ಎಂಬ ಆಶಯದಿಂದ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಗಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R