ಜಗಳೂರಿನಲ್ಲಿ ಹಾಲಿ–ಮಾಜಿ ಶಾಸಕರ ನಡುವೆ ಮಾತಿನ ಸಮರ
ದಾವಣಗೆರೆ, 25 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಜಗಳೂರು ಕ್ಷೇತ್ರದ ಹಾಲಿ ಶಾಸಕ ಬಿ. ದೇವೇಂದ್ರಪ್ಪ ಹಾಗೂ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರ ನಡುವೆ ‘ರೇವ್ ಪಾರ್ಟಿ’ ವಿಚಾರವಾಗಿ ವಾಕ್ಸಮರ ತೀವ್ರಗೊಂಡಿದೆ. ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಬೆಂಗಳೂರಿಗೆ ಮರಳಿದ ಶಾಸಕ ದೇವೇಂದ್ರಪ
Jagaluru-MLA-B-Devendrappa-HP-Rajesh-rave-party-war-accusations-counter-charges


ದಾವಣಗೆರೆ, 25 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಜಗಳೂರು ಕ್ಷೇತ್ರದ ಹಾಲಿ ಶಾಸಕ ಬಿ. ದೇವೇಂದ್ರಪ್ಪ ಹಾಗೂ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರ ನಡುವೆ ‘ರೇವ್ ಪಾರ್ಟಿ’ ವಿಚಾರವಾಗಿ ವಾಕ್ಸಮರ ತೀವ್ರಗೊಂಡಿದೆ.

ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಬೆಂಗಳೂರಿಗೆ ಮರಳಿದ ಶಾಸಕ ದೇವೇಂದ್ರಪ್ಪ ಅವರನ್ನು ಬೆಂಬಲಿಗರು ಸ್ವಾಗತಿಸಿದ ಸಂದರ್ಭದಲ್ಲಿ ₹10 ಲಕ್ಷ ವೆಚ್ಚದಲ್ಲಿ ‘ರೇವ್ ಪಾರ್ಟಿ’ ಆಯೋಜಿಸಲಾಗಿತ್ತು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಆರೋಪಿಸಿದ್ದಾರೆ.

‘ಬರದ ಸಮಯದಲ್ಲಿ ಇಂತಹ ಪಾರ್ಟಿ ಮಾಡುವ ಅಗತ್ಯವಿತ್ತೇ?’ ಎಂದು ಎಚ್.ಪಿ. ರಾಜೇಶ್ ಪ್ರಶ್ನಿಸಿದ್ದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಬಿ. ದೇವೇಂದ್ರಪ್ಪ, ತಮ್ಮ ವಿರುದ್ಧದ ಆರೋಪಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸವಾಲು ಹಾಕಿದ್ದಾರೆ.

“ಯಾರು ಮದ್ಯ ಸೇವಿಸುತ್ತಾರೆ ಎಂಬುದನ್ನು ತಪಾಸಣೆ ಮಾಡಿಸೋಣ. ಪೊಲೀಸರು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುವ ರೀತಿಯಲ್ಲೇ ನಮ್ಮನ್ನೂ ಪರೀಕ್ಷಿಸಲಿ.

ನಾನು ನಾಲ್ಕು ವರ್ಷಗಳಿಂದ ಮದ್ಯ ಸೇವಿಸುವುದನ್ನು ಬಿಟ್ಟಿದ್ದೇನೆ. ನಾನು, ಎಚ್.ಪಿ. ರಾಜೇಶ್ ಹಾಗೂ ಎಸ್.ವಿ. ರಾಮಚಂದ್ರ ಮೂವರೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳೋಣ. ಅದಕ್ಕೆ ಅವರು ಸಿದ್ಧರಿದ್ದಾರೆಯೇ?” ಎಂದು ದೇವೇಂದ್ರಪ್ಪ ಸವಾಲು ಹಾಕಿದ್ದಾರೆ.

“ನನ್ನ ಕ್ಷೇತ್ರದ ಜನ ಸ್ವಾಭಿಮಾನದಿಂದ ನನ್ನ ಸ್ವಾಗತಕ್ಕೆ ಬಂದಿದ್ದರು. ದಾಬಸ್ಪೇಟೆ ಮಾರ್ಗವಾಗಿ ನಾವು ಹೊರಗೆ ಬಂದಿದ್ದೇವೆ. ಬೆಂಗಳೂರಿನ ಐಷಾರಾಮಿ ಹೋಟೆಲ್ನಲ್ಲಿ ಪಾರ್ಟಿ ಮಾಡಿದ್ದೇವೆ ಎಂದು ಆರೋಪಿಸಲಾಗುತ್ತಿದೆ.

ನನ್ನ ದುಡ್ಡು, ನನ್ನ ಜನ. ನಾನು ಅವರಿಗೆ ಏನು ಬೇಕಾದರೂ ಕೊಡುತ್ತೇನೆ; ಅವರು ನನಗೆ ಕೊಡುತ್ತಾರೆ” ಎಂದು ಶಾಸಕ ದೇವೇಂದ್ರಪ್ಪ ಹೇಳಿದ್ದಾರೆ.ಇದೇ ವೇಳೆ ಮಾಜಿ ಶಾಸಕ ಎಚ್.ಪಿ. ರಾಜೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ನನ್ನ ಖಾಸಗಿ ಬದುಕಿನ ಬಗ್ಗೆ ಮಾತನಾಡಲು ನಿಮಗೆ ಹಕ್ಕು ಕೊಟ್ಟವರು ಯಾರು? ಅಲ್ಲಿ ಬಂದವರು ಎಲ್ಲರೂ ಸ್ವಾಭಿಮಾನಿಗಳು. ಅವರು ಪ್ರಶ್ನೆ ಮಾಡಿದರೆ ಏನು ಹೇಳುತ್ತೀರಿ?” ಎಂದು ಪ್ರಶ್ನಿಸಿದರು.

“ಒಬ್ಬ ಡಿ ದರ್ಜೆ ನೌಕರ ಶಾಸಕರಾಗಬಾರದಾ? ಅತ್ತೆ ಸೊಸೆಗೆ ಕಾಟ ಕೊಟ್ಟಂತೆ ಕೊಡುತ್ತೀರಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮೂಲಕ ಜಗಳೂರು ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದ್ದು, ‘ರೇವ್ ಪಾರ್ಟಿ’ ಆರೋಪ–ಪ್ರತ್ಯಾರೋಪಗಳು ಚರ್ಚೆಗೆ ಗ್ರಾಸವಾಗಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande