
ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್ಥಿಕ ಇಲಾಖೆಯ ಟಿಪ್ಪಣಿ ಕುರಿತು ಮಾತನಾಡುವಾಗ ಹಿಂದಿನ ಯಡಿಯೂರಪ್ಪ ಹಾಗೂ ತಮ್ಮ ಸರ್ಕಾರದ ಅವಧಿಯಲ್ಲೂ ಇದೇ ರೀತಿಯ ಟಿಪ್ಪಣಿಗಳು ಬಂದಿದ್ದವು ಎಂದು ಹೇಳಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ಯಡಿಯೂರಪ್ಪ ಹಾಗೂ ತಮ್ಮ ಸರ್ಕಾರದ ಅವಧಿಯಲ್ಲಿ ಕೋವಿಡ್ ಮೊದಲ, ಎರಡನೇ ಮತ್ತು ಮೂರನೇ ಅಲೆ ತೀವ್ರವಾಗಿದ್ದವು. ಆ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.
ಈಗಿನ ಪರಿಸ್ಥಿತಿಗೂ ಆಗಿನ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಅದರಂತೆ ಕರ್ನಾಟಕದ ಆದಾಯವೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ತಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು ₹65 ಸಾವಿರ ಕೋಟಿ ಇದ್ದ ಸಾಲವನ್ನು ಈಗಿನ ಸರ್ಕಾರ ₹1.20 ಲಕ್ಷ ಕೋಟಿಗೆ ಹೆಚ್ಚಿಸಿದೆ. ಅಂದರೆ ಸಾಲದ ಪ್ರಮಾಣ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಇಷ್ಟಾದರೂ ಹಣಕಾಸು ಇಲಾಖೆಯು ಕಂದಾಯ ವೆಚ್ಚಗಳು ಅತಿಯಾಗಿರುವುದರಿಂದ ಯಾವುದೇ ಹೊಸ ಕಾರ್ಯಕ್ರಮಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿರುವುದು ಸರ್ಕಾರದ ಹಣಕಾಸು ನಿರ್ವಹಣೆ ವಿಫಲವಾಗಿರುವುದನ್ನು ತೋರಿಸುತ್ತದೆ. ಸರ್ಕಾರದ ಖಜಾನೆ ಖಾಲಿಯಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಹಿಂದಿನ ಸರ್ಕಾರವನ್ನು ಹೋಲಿಕೆ ಮಾಡುವ ಬದಲು ಈಗಿನ ಸರ್ಕಾರ ತನ್ನ ಹಣಕಾಸಿನ ದುಸ್ಥಿತಿಯನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಅದಕ್ಕೆ ಅಗತ್ಯವಾದ ರಾಜಕೀಯ ಇಚ್ಛಾಶಕ್ತಿ ಕಾಣಿಸುತ್ತಿಲ್ಲ. ಇದು ಕರ್ನಾಟಕದ ದುರ್ದೈವ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.
ತಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಆದಾಯದ ಬಜೆಟ್ ಮಂಡಿಸಲಾಗಿತ್ತು. ಆದರೆ ಈಗ ಸತತ ಮೂರು ಕೊರತೆ ಬಜೆಟ್‌ಗಳನ್ನು ಮಂಡಿಸಿರುವುದು ಸರ್ಕಾರದ ಹಣಕಾಸಿನ ಸ್ಥಿತಿಗೆ ಸಾಕ್ಷಿಯಾಗಿದೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.