

ಬಳ್ಳಾರಿ, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಪ್ರಸ್ತುತ ಎಲ್ ನೀನೊ ಪ್ರಭಾವದಿಂದಾಗಿ ಮಳೆ ಕಡಿಮೆಯಾಗಿದ್ದು, ಬಿತ್ತನೆ ಪ್ರಮಾಣ ಕುಂಠಿತಗೊಂಡು ಕೃಷಿ ಬೆಳೆ ಉತ್ಪಾದಕತೆಗೆ ಹಿನ್ನಡೆಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರು ಕೇವಲ ಸಾಂಪ್ರದಾಯಿಕ ಕೃಷಿಯನ್ನೇ ಅವಲಂಬಿಸದೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಂ. ಸೋಮಸುಂದರ್ ಅವರು ಹೇಳಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಹಗರಿ ಇವರ ಸಂಯುಕ್ತ ಆಶ್ರಯದಲ್ಲಿ ‘ಆತ್ಮ’ ಯೋಜನೆಯಡಿ ಹಮ್ಮಿಕೊಂಡಿದ್ದ ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ‘ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ ಯೋಜನೆ’ಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಮಣ್ಣು ವಿಜ್ಞಾನಿ ಡಾ. ರವಿ ಎಸ್. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶ ಹಾಗೂ ಸಾವಯವ ಗೊಬ್ಬರವನ್ನು ಸಮರ್ಪಕವಾಗಿ ನಿರ್ವಹಿಸುವುದು ಮುಖ್ಯ. ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮಾತ್ರ ಸೀಮಿತವಾಗದೆ, ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡುವುದು ಹಾಗೂ ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡುವುದರಿಂದ ಉತ್ತಮ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ತಿಳಿಸಿದರು.
ತಾಂತ್ರಿಕ ಅಧಿವೇಶನದಲ್ಲಿ ತಜ್ಞರ ಸಲಹೆಗಳು:
ಡಾ. ಗಿರೀಶ್ (ತಳಿ ಸಂಶೋಧಕರು): ಜೋಳ, ಸಿರಿಧಾನ್ಯ ಮತ್ತು ಕುಸುಬೆ ಬೀಜಗಳ ನೂತನ ತಳಿಗಳ ಮಹತ್ವವನ್ನು ವಿವರಿಸಿ, ಈ ಧಾನ್ಯಗಳನ್ನು ನೇರವಾಗಿ ಮಾರಾಟ ಮಾಡದೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದರು.
ಡಾ. ಶಿಲ್ಪಾ (ಗೃಹ ವಿಜ್ಞಾನಿ): ಮಹಿಳೆಯರು ಬಟ್ಟೆ, ಕಿರಾಣಿ, ಟೈಲರಿಂಗ್, ಉಪ್ಪಿನಕಾಯಿ ತಯಾರಿಕೆ, ಕುರಿ ಸಾಕಾಣಿಕೆ, ಎರೆಹುಳು ಗೊಬ್ಬರ (ವರ್ಮಿಕಂಪೆÇೀಸ್ಟ್) ತಯಾರಿಕೆಯಂತಹ ಕಿರು ಉದ್ದಿಮೆಗಳನ್ನು ಪ್ರಾರಂಭಿಸಲು ಸಲಹೆ ನೀಡಿದರು. ಆಹಾರ ಉತ್ಪನ್ನ ಮಾರಾಟಕ್ಕೆ ಲ್ಯಾಬ್ ಟೆಸ್ಟ್, ಎಫ್ಎಸ್ಎಸ್ಎಐ ಪರವಾನಗಿ ಹಾಗೂ ಗುಣಮಟ್ಟದ ಪ್ಯಾಕಿಂಗ್ ಮತ್ತು ಲೇಬಲಿಂಗ್ ಕಡ್ಡಾಯ ಎಂದು ವಿವರಿಸಿದರು.
ಡಾ. ಲೋಕೇಶ್ (ಬೀಜ ವಿಜ್ಞಾನಿ): ರಾಗಿ, ಸಿರಿಧಾನ್ಯಗಳ ಮೌಲ್ಯವರ್ಧನೆಯ ಮಹತ್ವ ವಿವರಿಸುತ್ತಾ, ರೊಟ್ಟಿಗೆ ಅತ್ಯಂತ ಸೂಕ್ತವಾದ ‘ಆರ್ಟಿಎಸ್-43’ ಜೋಳದ ತಳಿಯ ಬಗ್ಗೆ ಮಾಹಿತಿ ನೀಡಿದರು. ಸ್ವಸಹಾಯ ಸಂಘಗಳ ಮೂಲಕ ಅಣಬೆ, ಉಪ್ಪಿನಕಾಯಿ ತಯಾರಿಕೆಯಿಂದ ಮಹಿಳೆಯರು ಸಬಲೀಕರಣಗೊಳ್ಳಬಹುದು ಎಂದರು.
ಡಾ. ನವೀನ್ (ವಿಜ್ಞಾನಿ): ಯಾವುದೇ ಉದ್ಯಮವನ್ನು ಪ್ರಾರಂಭಿಸುವ ಮುನ್ನ ಸೂಕ್ತ ತರಬೇತಿ ಪಡೆದು ಕೌಶಲ್ಯ ಬೆಳೆಸಿಕೊಳ್ಳುವಂತೆ ತಿಳಿಸಿ, ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಆಶಯವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಶ್ರೀಧರಗಡ್ಡೆ ಗ್ರಾಮದ ತ್ರಿವೇಣಿ ಸಂಗಮ ಮಹಿಳಾ ಸ್ವಸಹಾಯ ಸಂಘದ ಸದಸ್ಯೆ ಬಸಮ್ಮ ಅವರು ಅಣಬೆ ಬೇಸಾಯ ಮತ್ತು ರೊಟ್ಟಿ ತಯಾರಿಕೆ ಮೂಲಕ ಆರ್ಥಿಕವಾಗಿ ಸಬಲರಾದ ತಮ್ಮ ಯಶೋಗಾಥೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ಜಂಬಣ್ಣ (ರೂಪನಗುಡಿ ಹೊಬಳಿ), ಯೇಸುಬಾಬು (ಕಂಪ್ಲಿ ಕೃಷಿ ತರಬೇತಿ ಕೇಂದ್ರ), ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕಿ ಕವಿತಾಕುಮಾರಿ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ವಾಣಿ ಕೋರಪ್ಪಳ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರೇಣುಕಾರಾಧ್ಯ ಜೆ., ಹಾಗೂ ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ಕೃಷಿ ಸಖಿಯರು, ರೈತ ಬಾಂಧವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್