
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಬಿಜೆಪಿ ಆಡಳಿತವಿರುವ ರಾಜ್ಯಗಳ ಸಚಿವರಿಗಾಗಿ ಸೆ.3ರಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ದೇಶದ ವಿವಿಧ ಬಿಜೆಪಿ ಆಡಳಿತದ ರಾಜ್ಯಗಳಿಂದ ಸುಮಾರು 25 ಸಚಿವರು ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ವಿನಯ್ ಸಹಸ್ರಬುದ್ಧೆ ಅವರು ಸಚಿವರಿಗೆ ತರಬೇತಿ ನೀಡಲಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ನೀತಿಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು, ಯುವಜನರೊಂದಿಗೆ ಸಂವಾದ ಹೆಚ್ಚಿಸುವುದು ಹಾಗೂ ಸರ್ಕಾರದ ಸಾಧನೆ ಮತ್ತು ಜನಕಲ್ಯಾಣ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸುವ ಕುರಿತು ತರಬೇತಿ ನೀಡಲಾಗುತ್ತದೆ. ಜಲ ನಿರ್ವಹಣೆ, ಅಂತರ್ಜಲ ಸಂರಕ್ಷಣೆ ಹಾಗೂ ನೀರಾವರಿ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ತರಬೇತಿ ಶಿಬಿರದ ಬಳಿಕ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯ ಬಲಪಡಿಸುವುದು ಹಾಗೂ ‘ಜಲ ಸುರಕ್ಷಿತ ಭಾರತ’, ‘ವಿಕಸಿತ ಭಾರತ–2047’ ಗುರಿಗಳನ್ನು ಮುನ್ನಡೆಸುವ ಉದ್ದೇಶದಿಂದ ಸೆ.1 ಮತ್ತು 2ರಂದು ನವದೆಹಲಿಯಲ್ಲಿ ಜಲಶಕ್ತಿ ಸಚಿವಾಲಯದ ಮೊದಲ ಇಲಾಖಾ ಶೃಂಗಸಭೆ ನಡೆದಿತ್ತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.