ತಡ ರಾತ್ರಿ ಬೆಂಗಳೂರಿನಲ್ಲಿ ಸಚಿವ ಕೃಷ್ಣ ಬೈರೇಗೌಡ ಪರಿಶೀಲನೆ: ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ತರಾಟೆ
ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಕ್ಲಾಸ್
krishna-byre-gowda-bengaluru-night-rounds-pulls-up-officials-over-civic-issues


ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದ ಪ್ರಮುಖ ರಸ್ತೆಗಳಲ್ಲಿ ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಹಾಗೂ ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷತೆಯ ಸ್ಥಿತಿಗತಿ ಪರಿಶೀಲಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದಿಢೀರ್ ನೈಟ್ ರೌಂಡ್ಸ್ ನಡೆಸಿದರು.

ಜೆ.ಪಿ.ನಗರ ಮೆಟ್ರೋ ನಿಲ್ದಾಣದಿಂದ ಹೊರವರ್ತುಲ ರಸ್ತೆ ಮೂಲಕ ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ–ನೈಸ್ ರಸ್ತೆ ಜಂಕ್ಷನ್ವರೆಗೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಹಲವು ಕಡೆ ಬೀದಿ ದೀಪಗಳು ಕಾರ್ಯನಿರ್ವಹಿಸದಿರುವುದು, ಪಾದಚಾರಿ ಮಾರ್ಗಗಳ ದುಸ್ಥಿತಿ, ತೆರೆದ ಚರಂಡಿಗಳು ಹಾಗೂ ರಸ್ತೆ ನಿರ್ವಹಣೆಯಲ್ಲಿನ ಲೋಪಗಳು ಸಚಿವರ ಗಮನಕ್ಕೆ ಬಂದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.

ಜೆ.ಪಿ.ನಗರ ಮೆಟ್ರೋ ನಿಲ್ದಾಣದಿಂದ ಗೊಟ್ಟಿಗೆರೆವರೆಗೆ ಒಟ್ಟು 1,540 ಬೀದಿ ದೀಪಗಳ ಪೈಕಿ 1,010 ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 530 ದೀಪಗಳು ಅಂದರೆ ಶೇ.34ರಷ್ಟು ದೀಪಗಳು ಉರಿಯುತ್ತಿಲ್ಲ ಎಂದು ಸಚಿವರು ಅಧಿಕಾರಿಗಳ ಗಮನಕ್ಕೆ ತಂದರು. ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬನ್ನೇರುಘಟ್ಟ–ನೈಸ್ ರಸ್ತೆ ಜಂಕ್ಷನ್ ಬಳಿ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ ಹಾಗೂ ಡಾಂಬರೀಕರಣ ಕಾಮಗಾರಿಯಲ್ಲಿನ ಲೋಪಗಳನ್ನೂ ಸಚಿವರು ಪರಿಶೀಲಿಸಿದರು. ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ಡಾಂಬರೀಕರಣ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

“ಕೆಲಸ ಮಾಡದ ಗುತ್ತಿಗೆದಾರರಿಗೆ ದಂಡ ವಿಧಿಸಿ, ಅಗತ್ಯವಿದ್ದರೆ ಬ್ಲ್ಯಾಕ್ಲಿಸ್ಟ್ಗೆ ಸೇರಿಸಲು ಹಿಂಜರಿಯಬೇಡಿ. ಬೀದಿ ದೀಪ, ರಸ್ತೆ ಗುಂಡಿ ಹಾಗೂ ಫುಟ್ಪಾತ್ನಂತಹ ಕನಿಷ್ಠ ಮೂಲಸೌಕರ್ಯಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಬೇಕು. ಇಲ್ಲವಾದರೆ ಕೆಳಹಂತದಿಂದ ಹಿರಿಯ ಅಧಿಕಾರಿಗಳವರೆಗೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.

ಬನ್ನೇರುಘಟ್ಟ ರಸ್ತೆಯನ್ನು ಮೆಟ್ರೋ ಹಾಗೂ ಪೈಪ್ಲೈನ್ ಕಾಮಗಾರಿಗಳಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರವಾಗಿ ಸಂಪೂರ್ಣ ರಸ್ತೆಯನ್ನು ವೈಟ್ಟಾಪಿಂಗ್ ಮಾಡುವ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಅಲ್ಲದೆ, ತೆರವುಗೊಳಿಸಿದ ಪಾದಚಾರಿ ಮಾರ್ಗಗಳಲ್ಲಿ ಮರುಒತ್ತುವರಿ ತಡೆಯಲು ಜಿಬಿಎ ಹಾಗೂ ನಗರ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಂಟಿ ಟಾಸ್ಕ್ಫೋರ್ಸ್ ರಚಿಸುವುದಾಗಿ ಹೇಳಿದರು.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande