18 ಲಕ್ಷ ಅಸಹಾಯಕರ 5 ತಿಂಗಳ ಸಾಮಾಜಿಕ ಪಿಂಚಣಿ ಬಾಕಿ: ಆರ್. ಅಶೋಕ್ ಆಕ್ರೋಶ
ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ರಾಜ್ಯಾದ್ಯಂತ ಅಂಗವಿಕಲರು, ವೃದ್ಧರು, ವಿಧವೆಯರು ಸೇರಿದಂತೆ ಸುಮಾರು 18 ಲಕ್ಷ ಅಸಹಾಯಕರ ಸಾಮಾಜಿಕ ಪಿಂಚಣಿಯನ್ನು ಕಳೆದ ಐದು ತಿಂಗಳಿಂದ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ರಾಜ್ಯಾದ್ಯಂತ ಅಂಗವಿಕಲರು, ವೃದ್ಧರು, ವಿಧವೆಯರು ಸೇರಿದಂತೆ ಸುಮಾರು 18 ಲಕ್ಷ ಅಸಹಾಯಕರ ಸಾಮಾಜಿಕ ಪಿಂಚಣಿಯನ್ನು ಕಳೆದ ಐದು ತಿಂಗಳಿಂದ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾಮಾಜಿಕ ಪಿಂಚಣಿಯನ್ನೇ ನಂಬಿಕೊಂಡು ಬದುಕುತ್ತಿರುವ ಅಸಹಾಯಕರ ಜೀವನವನ್ನು ಸರ್ಕಾರ ಅತಂತ್ರಗೊಳಿಸಿದೆ ಎಂದು ಆರೋಪಿಸಿದ್ದಾರೆ.

ವಾರ್ಷಿಕ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿ ಒಂದು ತಿಂಗಳಾದರೂ, ಅದು ಕೇವಲ ಕಾಗದದ ಮೇಲಷ್ಟೇ ಉಳಿದಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಐದು ತಿಂಗಳ ಬಾಕಿ ಪಿಂಚಣಿ ನೀಡುವ ಬದಲು ಸೆಪ್ಟೆಂಬರ್ ತಿಂಗಳ ಒಂದು ತಿಂಗಳ ಪಿಂಚಣಿ ಮಾತ್ರ ನೀಡುವುದಾಗಿ ಹೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಔಷಧಿ ಮತ್ತು ಊಟಕ್ಕಾಗಿ ಇದೇ ಪಿಂಚಣಿಯನ್ನು ಅವಲಂಬಿಸಿರುವ 18 ಲಕ್ಷ ಬಡಜನರ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ಬೊಕ್ಕಸದಲ್ಲಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಖರ್ಚು ಮಾಡಿ, ಇದೀಗ ಅಸಹಾಯಕ ವೃದ್ಧರು ಮತ್ತು ಅಂಗವಿಕಲರ ಪಿಂಚಣಿಗೆ ಕನ್ನ ಹಾಕಲಾಗುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಆದಾಯ ಮಿತಿ ಹೆಚ್ಚಳದ ಸರ್ಕಾರದ ಆದೇಶ ಕೇವಲ ತೋರಿಕೆಯ ಕ್ರಮವೇ ಅಥವಾ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಮುಚ್ಚಿಕೊಳ್ಳುವ ಪ್ರಯತ್ನವೇ ಎಂದು ಪ್ರಶ್ನಿಸಿದ್ದಾರೆ.

ಹೊಸ ಅರ್ಜಿ ಸಲ್ಲಿಕೆಗೂ ಅವಕಾಶ ನೀಡದೆ ಅರ್ಹ ಫಲಾನುಭವಿಗಳನ್ನು ಬೀದಿಗೆ ತಳ್ಳುತ್ತಿರುವುದೇ ಸರ್ಕಾರದ ‘ಪ್ರಜಾಸೇವೆ’ ಆಡಳಿತವೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಾಮಾಜಿಕ ಪಿಂಚಣಿಯನ್ನೇ ನಂಬಿ ಬದುಕುತ್ತಿರುವ ವೃದ್ಧರು, ಅಂಗವಿಕಲರು ಹಾಗೂ ಶೋಷಿತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಬಾಕಿ ಇರುವ ಐದು ತಿಂಗಳ ಪಿಂಚಣಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಬೇಕು ಮತ್ತು ಹೊಸ ಅರ್ಜಿ ಸಲ್ಲಿಕೆಗೆ ಇರುವ ಅಡೆತಡೆಗಳನ್ನು ತೆರವುಗೊಳಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಇಲ್ಲವಾದರೆ ಅಸಹಾಯಕರ ಪರವಾಗಿ ಬಿಜೆಪಿ ಕರ್ನಾಟಕ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande