ವಕ್ಕಲೇರಿಯಲ್ಲಿ ಯಶಸ್ವಿಯಾದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ
ವಕ್ಕಲೇರಿಯಲ್ಲಿ ಯಶಸ್ವಿಯಾದ ಹೋಬಳಿ ಮಟ್ಟದ 'ಪ್ರಜಾಸೇವಾ ಆಂದೋಲನ'
ಶನಿವಾರ ತಾಲೂಕಿನ ವಕ್ಕಲೇರಿ ಗ್ರಾಮದ ವಿದ್ಯಾಭಿವೃದ್ಧಿ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ 'ಪ್ರಜಾಸೇವಾ ಆಂದೋಲನ' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು


ಕೋಲಾರ, 19 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಹಾಗೂ ಜನರಿಗೆ ತೊಂದರೆಯಾದರೆ ಅದಕ್ಕೆ ಪಿಡಿಒಗಳು, ಕಂದಾಯ ನಿರೀಕ್ಷಕರು, ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ಖಡಕ್ ಎಚ್ಚರಿಕೆ ನೀಡಿದರು.

ಶನಿವಾರ ತಾಲೂಕಿನ ವಕ್ಕಲೇರಿ ಗ್ರಾಮದ ವಿದ್ಯಾಭಿವೃದ್ಧಿ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ 'ಪ್ರಜಾಸೇವಾ ಆಂದೋಲನ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸರ್ಕಾರಿ ಶಾಲೆ, ಆಸ್ಪತ್ರೆ ಅಥವಾ ಹಾಸ್ಟೆಲ್ಗಳಲ್ಲಿ ಮೂಲಸೌಕರ್ಯ ಹಾಗೂ ಊಟದ ಕೊರತೆಯಿದ್ದರೆ ಅದನ್ನು ಮುಚ್ಚಿಡದೆ ನೇರವಾಗಿ ಸರ್ಕಾರದ ಗಮನಕ್ಕೆ ತರಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ರೈತರಿಗೆ ಕೊಳವೆಬಾವಿ ಕೊರೆಯಿಸಲು ಸರ್ಕಾರ ನೀಡುವ ೫ ಲಕ್ಷ ರೂ. ಅನುದಾನ ಸಾಲದಿದ್ದರೆ, ಆ ಬಗ್ಗೆಯೂ ಸರ್ಕಾರಕ್ಕೆ ವರದಿ ನೀಡಬೇಕು; ಸರ್ಕಾರವು ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಆರೋಗ್ಯ ಸೇವೆಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕರು, ಒಕ್ಕಲೇರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ರೋಗಿಗಳನ್ನು ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ಕಳುಹಿಸಿಕೊಡಬೇಕು. ಒಂದು ವೇಳೆ ಎಸ್ಎನ್ಆರ್ ಆಸ್ಪತ್ರೆಯಲ್ಲೂ ಸೌಲಭ್ಯವಿಲ್ಲದಿದ್ದರೆ, ಆಸ್ಪತ್ರೆಯವರೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ರೋಗಿಗಳನ್ನು ಬೆಂಗಳೂರಿಗೆ ಕಳುಹಿಸಿಕೊಡುವ ಜವಾಬ್ದಾರಿ ಹೊರಬೇಕು ಎಂಬುದು ಸರ್ಕಾರದ ಆದೇಶವಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಜಮೀನು ಖಾತೆ, ರಸ್ತೆ ಹಾಗೂ ಸ್ಮಶಾನದ ಜಾಗದಂತಹ ದೈನಂದಿನ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆಯುವ ಬದಲು ಈ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವೇಮಗಲ್ ಹಾಗೂ ವಕ್ಕಲೇರಿಯ ಯಶಸ್ಸಿನ ನಂತರ ಮುಂದಿನ ಶನಿವಾರ ನರಸಾಪುರದಲ್ಲಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಘೋಷಿಸಿದರು.

ವಿಧಾನಪರಿಷತ್ ಶಾಸಕ ಎಂ. ಎಲ್. ಅನಿಲ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಆಶಯದಂತೆ ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಲು 'ಪ್ರಜಾಸೇವಾ ಇಲಾಖೆ'ಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಸೆಪ್ಟೆಂಬರ್ ೫ರಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನಪರಿಹಾರದ ಬೇಡಿಕೆಈ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಕೋಲಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ೧೮೦೦ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಶೇ. ೯೦ರಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ. ವೇಮಗಲ್ ಹೋಬಳಿಯಲ್ಲಿ ೧೧೨೪ ಅರ್ಜಿಗಳ ಪೈಕಿ ಶೇ. ೮೦-೯೦ರಷ್ಟು ಬಗೆಹರಿಸಲಾಗಿದ್ದು, ಇಂದಿನ ಒಕ್ಕಲೇರಿ ಹೋಬಳಿಯ ೪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೬೨೦ ಅರ್ಜಿಗಳು ಸಲ್ಲಿಕೆಯಾಗಿವೆ, ಅದರಲ್ಲಿ ೪೨೬ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ ಆದೇಶ ಪತ್ರ ನೀಡಲಾಗಿದೆ ಎಂದು ಅವರು ವಿವರಿಸಿದರು. ಈ ಜನಪರ ಯೋಜನೆಗಾಗಿ ಅಧಿಕಾರಿಗಳು ಎರಡನೇ ಮತ್ತು ನಾಲ್ಕನೇ ಶನಿವಾರದ ಸರ್ಕಾರಿ ರಜೆಗಳನ್ನೂ ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಅವರು ಪ್ರಶಂಸಿದರು.

ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ಮಾತನಾಡಿ, ಸ್ಥಗಿತಗೊಂಡಿದ್ದ ೯೦೪ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ಸೌಲಭ್ಯವನ್ನು ಈ ಆಂದೋಲನದ ಮೂಲಕ ಕಲ್ಪಿಸಲಾಗಿದೆ. ಸರ್ಕಾರಿ ಭೂಮಿ ಒತ್ತುವರಿ ತೆರವು, ಪೋಡಿ, ದುರಸ್ತಿ ಮುಂತಾದ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಪ್ರತ್ಯೇಕ ಕೌಂಟರ್ಗಳನ್ನು ತೆರೆದು ಸ್ಥಳದಲ್ಲೇ ಪರಿಹಾರ ಒದಗಿಸುತ್ತಿದ್ದಾರೆ. ಒಂದು ವೇಳೆ ಇಲ್ಲಿ ಪರಿಹಾರ ಸಿಗದಿದ್ದರೆ, ಸಾರ್ವಜನಿಕರು ಪ್ರತಿ ಬುಧವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಬಹುದು, ಅಥವಾ ಸಂಜೆ ೪ ಗಂಟೆಯ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬAಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವೈ. ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹನೀಫ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ತಹಶೀಲ್ದಾರ್ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande