
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ರಾಜ್ಯದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುವ ಆತಂಕ ಎದುರಾಗಿದೆ. ಹಾಲು ಉತ್ಪಾದಕರು ಪ್ರತಿ ಲೀಟರ್ಗೆ ₹8 ದರ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಮುಲ್, ಚಮುಲ್, ಮಂಡ್ಯ ಮಿಲ್ಕ್, ತುಮಕೂರು ಸೇರಿದಂತೆ ವಿವಿಧ ಹಾಲು ಒಕ್ಕೂಟಗಳು ದರ ಏರಿಕೆಗೆ ಆಗ್ರಹಿಸಿದ್ದು, ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ಸೆ.22ರಂದು ರಾಜ್ಯಾದ್ಯಂತ ರೈತರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
‘ಮೂರು ದಿನಗಳ ಒಳಗೆ ಹಾಲಿನ ದರ ಹೆಚ್ಚಳ ಮಾಡದಿದ್ದರೆ ಪ್ರತಿ ಜಿಲ್ಲೆಯಿಂದ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ಹಾಲು ಒಕ್ಕೂಟಗಳು ಸರ್ಕಾರಕ್ಕೆ ಗಡುವು ವಿಧಿಸಿವೆ ಎಂದು ಕೆಎಂಎಫ್ ಮಾಜಿ ನಿರ್ದೇಶಕ ವೀರಭದ್ರಬಾಬು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಉತ್ಪಾದನಾ ವೆಚ್ಚ ಹೆಚ್ಚಳತೀವ್ರ ಬರಗಾಲ ಹಾಗೂ ಶೇ.70ರಷ್ಟು ಮಳೆ ಕೊರತೆಯಿಂದ ಹುಲ್ಲಿನ ಲಭ್ಯತೆ ಕಡಿಮೆಯಾಗಿದೆ. ಇದರೊಂದಿಗೆ ಪಶು ಆಹಾರದ ಕಚ್ಚಾ ಸಾಮಗ್ರಿಗಳಾದ ಮೆಕ್ಕೆಜೋಳ, ಇಂಡಿ ಬೂಸಾ ಹಾಗೂ ಕಾಕಂಬಿ ದರದಲ್ಲಿ ಸುಮಾರು ಶೇ.25ರಷ್ಟು ಏರಿಕೆಯಾಗಿದೆ. ರಾಸುಗಳಿಗೆ ಬಳಸುವ ನೆಲಹಾಸಿನ ದರವೂ ಹೆಚ್ಚಾಗಿದೆ.
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕಚ್ಚಾತೈಲದ ಬೆಲೆ ಹಾಗೂ ಪೆಟ್ರೋಲ್, ಡೀಸೆಲ್ ದರಗಳ ಏರಿಕೆಯೂ ಹಾಲು ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ. ಈ ಎಲ್ಲ ಕಾರಣಗಳಿಂದ ಉತ್ಪಾದಕರಿಗೆ ಹೆಚ್ಚಿನ ವೆಚ್ಚವಾಗುತ್ತಿದ್ದು, ಹಾಲಿನ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂಬುದು ಉತ್ಪಾದಕರ ವಾದವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R