
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕನ್ನಡ ಚಲನಚಿತ್ರರಂಗದ ಮೇರು ನಟ, ಸಾಹಸಸಿಂಹ ದಿವಂಗತ. ಡಾ. ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ನಮನ ಸಲ್ಲಿಸಿ, ಡಾ. ವಿಷ್ಣುವರ್ಧನ್ ಅವರು ವಿಶಿಷ್ಟ ಪಾತ್ರಗಳ ಮೂಲಕ ದಶಕಗಳ ಕಾಲ ಜನರನ್ನು ರಂಜಿಸಿದ ಮೇರು ಕಲಾವಿದರಾಗಿದ್ದರು ಎಂದು ಸ್ಮರಿಸಿದ್ದಾರೆ. ವೃತ್ತಿಯ ಮೇಲಿನ ಅವರ ಶ್ರದ್ಧೆ, ಸಮಯಪ್ರಜ್ಞೆ ಹಾಗೂ ಶಿಸ್ತಿನ ಬದುಕು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
ಬಿ.ವೈ. ವಿಜಯೇಂದ್ರ ಅವರು, ತಮ್ಮ ಅದ್ಭುತ ಅಭಿನಯ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಆ ಕಲಾಚೇತನಕ್ಕೆ ಅಭಿಮಾನಪೂರ್ವಕ ನಮನಗಳು ಎಂದು ತಿಳಿಸಿದ್ದಾರೆ. ತಮ್ಮ ಕಲಾ ಪ್ರೌಢಿಮೆಯಿಂದ ಜನಮಾನಸದಲ್ಲಿ ಎಂದಿಗೂ ಮರೆಯಲಾಗದ ಅಭಿಮಾನ ಗಳಿಸಿರುವ ಡಾ. ವಿಷ್ಣುವರ್ಧನ್ ಅವರು, ತಮ್ಮ ಅನನ್ಯ ಕಲಾ ಕೊಡುಗೆಗಳಿಂದ ಕನ್ನಡ ಕಲಾರಸಿಕರ ಹೃದಯದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ತಮ್ಮ ಅಪೂರ್ವ ಅಭಿನಯ, ಸರಳತೆ ಹಾಗೂ ವ್ಯಕ್ತಿತ್ವದ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದ್ದಾರೆ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮೇಲಿನ ಅವರ ಅಪಾರ ಅಭಿಮಾನ ಹಾಗೂ ಕಲಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆ ಸದಾ ಸ್ಮರಣೀಯವಾಗಿದೆ. ‘ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ’ ಎಂಬ ಭಾವನೆಯೊಂದಿಗೆ ಕನ್ನಡಿಗರ ಹೃದಯದಲ್ಲಿ ಅವರು ಸದಾ ಅಜರಾಮರವಾಗಿದ್ದಾರೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.