ಬಾಕಿ ಇರುವ ಸಾಲ ಮರುಪಾವತಿ ಮಾಡಲು ರೈತರಿಗೆ ಕರೆ
ಬಾಕಿ ಇರುವ ಸಾಲ ಮರುಪಾವತಿ ಮಾಡಲು ರೈತರಿಗೆ ಕರೆ
ಕೋಲಾರ ತಾಲ್ಲೂಕು ಗ್ರಾಮೀಣಾಭಿವೃದ್ಧಿ ಮತ್ತು ರೈತರ ಸಹಕಾರಿ ಬ್ಯಾಂಕ್ ಸರ್ವ ಸದಸ್ಯರ ಸಭೆ ಕೋಲಾರದಲ್ಲಿ ನಡೆಯಿತು.


ಕೋಲಾರ, 18 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಜಿಲ್ಲೆಯಲ್ಲೇ ವಸೂಲಾತಿಯಲ್ಲಿ ಕೋಲಾರ ತಾಲ್ಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ರೈತರ ಸಹಕಾರಿ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. ರೈತರಿಂದ ಈಗಾಗಲೇ ಶೇ. ೭೫ರಷ್ಟು ಸಾಲ ವಸೂಲಿಯಾಗಿದೆ. ಈ ವರ್ಷ ತೀವ್ರ ಬರಗಾಲವಿದ್ದು, ರೈತರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಮರು ಪಾವತಿಸಿದರೆ ಮಾತ್ರ ರೈತರಿಗೆ ಮರುಸಾಲ ನೀಡಲು ಸಾಧ್ಯ. ಇದರಿಂದಾಗಿ ಬ್ಯಾಂಕ್ ಅಭಿವೃದ್ಧಿಯೂ ಸಾಧ್ಯವಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆಂದಟ್ಟಿ ಎ. ಶಿವಕುಮಾರ್ ತಿಳಿಸಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ೨೦೨೫–೨೬ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಹಿರಿಯ ರಾಜಕೀಯ ಧುರೀಣರಾದ ಪಿ. ವೆಂಕಟಗಿರಿಯಪ್ಪ, ಸಿ. ಬೈರೇಗೌಡ ಹಾಗೂ ಬಿಸಪ್ಪಗೌಡರು ಆಡಳಿತ ನಡೆಸಿರುವ ಇತಿಹಾಸ ಬ್ಯಾಂಕ್ಗಿದೆ. ಅವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಮುನ್ನಡೆಸಿಕೊಂಡು ಬರಲಾಗಿದೆ. ಸರ್ಕಾರದ ಆದೇಶಗಳಿಗೆ ಚ್ಯುತಿ ಬಾರದಂತೆ ರೈತರಿಗೆ ಕಾಲಕಾಲಕ್ಕೆ ಸಾಲ ಸೌಲಭ್ಯಗಳನ್ನು ಒದಗಿಸಿ ಆರ್ಥಿಕ ಶಿಸ್ತು ಪಾಲಿಸಿಕೊಂಡು ಬರಲಾಗಿದೆ ಎಂದರು.

ಸರ್ಕಾರದಿಂದ ೧೦.೫೦ ಕೋಟಿ ಸಾಲ ತರಲಾಗಿದ್ದು, ಅದರಲ್ಲಿ ೬.೭೫ ಕೋಟಿ ಸಾಲ ನೀಡಲಾಗಿದೆ. ಪಿಗ್ಮಿ ಮೂಲಕ ೩೮ ಲಕ್ಷ ವಸೂಲಿ ಮಾಡಲಾಗಿದ್ದು, ೧೨ ಲಕ್ಷ ಸಾಲ ನೀಡಲಾಗಿದೆ. ೩೫ ಲಕ್ಷವನ್ನು ರಾಜ್ಯ ಬ್ಯಾಂಕ್ನಲ್ಲಿ ಎಫ್ಡಿ ಇರಿಸಲಾಗಿದೆ ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ರೈತರ ಮನೆ ಬಾಗಿಲಿಗೆ ತಲುಪಿಸಲು ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಪಿಎಲ್ಡಿ ಬ್ಯಾಂಕ್ನ ಹೊಸ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ೧೮ ಲಕ್ಷ ಲಭ್ಯವಿದೆ. ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಅವರು ೧೦ ಲಕ್ಷ ಅನುದಾನ ನೀಡಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಶಾಸಕ ಕೊತ್ತೂರು ಮಂಜುನಾಥ್ ಆಯ್ಕೆಯಾಗಿದ್ದು, ಅವರೂ ಸಹಕಾರ ಕೋರಲಾಗಿದೆ. ಮುಂದಿನ ತಿಂಗಳು ಹೊಸ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಸಭೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಂ. ವೆಂಕಟರಾಮ್, ನಿರ್ದೇಶಕರಾದ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್, ಎನ್.ಜಿ. ಬ್ಯಾಟಪ್ಪ, ವಿ.ಎಂ. ಶಶಿಧರ್, ಟಿ.ಕೆ. ಬೈರೇಗೌಡ, ಚಿಕ್ಕಹಸಾಳ ಮಂಜುನಾಥ್, ಕೆ.ಎಂ. ವೆಂಕಟೇಶ್, ಜಿ. ನರೇಶ್ ಬಾಬು, ವೆಂಕಟರಾಮಪ್ಪ, ಲಕ್ಷ್ಮಮ್ಮ, ಅಂಬಿಕಾ, ಮುನಿರತ್ನಮ್ಮ, ವೆಂಕಟಲಕ್ಷಮ್ಮ, ಕಸ್ಕಾರ್ಡ್ ಬ್ಯಾಂಕ್ನ ನವನಿತ, ಸಿಇಒ ಎಸ್. ಶ್ರೀನಿವಾಸ್, ಲೆಕ್ಕಾಧಿಕಾರಿ ಶೋಭಾರಾಣಿ, ಸಿಬ್ಬಂದಿ ಸಿ. ಶ್ಯಾಮಲ, ಶೇಖರ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande