ಮಳವಳ್ಳಿಯಲ್ಲಿ 800 ಎಕರೆ ಸರ್ಕಾರಿ ಭೂಮಿ ಕಬಳಿಕೆ ಆರೋಪ: ಕ್ರಮಕ್ಕೆ ಮಾಜಿ ಶಾಸಕ ಅನ್ನದಾನಿ ಆಗ್ರಹ
ಭೂಮಿ ಕಬಳಿಕೆ ಆರೋಪ: ಕ್ರಮಕ್ಕೆ ಮಾಜಿ ಶಾಸಕ ಅನ್ನದಾನಿ ಆಗ್ರಹ
Malavalli-800-acre-government-land-encroachment-allegation-former-MLA-annadani-demands-action


ಮಂಡ್ಯ, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಮಳವಳ್ಳಿ ತಾಲ್ಲೂಕಿನಲ್ಲಿ ಸುಮಾರು 800 ಎಕರೆ ಸರ್ಕಾರಿ ಆಸ್ತಿ ಭೂಕಬಳಿಕೆಯಾಗಿದ್ದು, ಈ ಸಂಬಂಧ ಭೂಗಳ್ಳರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಡಾ. ಕೆ. ಅನ್ನದಾನಿ ಆರೋಪಿಸಿದರು.

ಮಂಡ್ಯದಲ್ಲಿ ಮಾತನಾಡಿದ ಅವರು, 305 ಎಕರೆ ಭೂಮಿಯ ಆರ್ಟಿಸಿ ರದ್ದುಪಡಿಸಲಾಗಿದ್ದರೂ, ಇದುವರೆಗೆ ಸರ್ಕಾರ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿಲ್ಲ ಎಂದು ದೂರಿದರು. ಭೂಕಬಳಿಕೆ ಕುರಿತು ಲೋಕಾಯುಕ್ತರೂ ವರದಿ ನೀಡಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

‘ಮಂಡ್ಯ ಜಿಲ್ಲಾಧಿಕಾರಿ ನಾಟಕೀಯವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಆಸ್ತಿ ಕಬಳಿಕೆಯಾಗಿದ್ದರೂ ಏಕೆ ಸುಮ್ಮನಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಭೂಗಳ್ಳರ ಪರ ಜಿಲ್ಲಾಡಳಿತವಿದೆಯೇ ಎಂಬ ಪ್ರಶ್ನೆ ಎದುರಾಗಿದೆ’ ಎಂದು ಅನ್ನದಾನಿ ಹೇಳಿದರು.

ಕೆರೆಕಟ್ಟೆಗಳಿಗೆ ನೀರು ಹರಿಸುವಂತೆ ಆಗ್ರಹ:ಮಳವಳ್ಳಿ ತಾಲ್ಲೂಕು ಕೆಆರ್ಎಸ್ ಜಲಾಶಯದ ಕೊನೆಯ ಭಾಗದಲ್ಲಿದ್ದು, ತಾಲ್ಲೂಕಿನ ಕೆರೆಕಟ್ಟೆಗಳಿಗೆ ಸಮರ್ಪಕವಾಗಿ ನೀರು ತುಂಬಿಸಿಲ್ಲ ಎಂದು ಅವರು ಆಕ್ಷೇಪಿಸಿದರು.

‘ಕೆಆರ್ಎಸ್ನಲ್ಲಿ 105 ಅಡಿ ನೀರಿದ್ದರೂ ಮಳವಳ್ಳಿ ತಾಲ್ಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸದಿರುವುದು ಏಕೆ? ತಮಿಳುನಾಡಿಗೆ ನೀರು ಬಿಡಲು ನೀರನ್ನು ಉಳಿಸಿಕೊಂಡಿದ್ದೀರಾ? ರಾಜ್ಯ ಸರ್ಕಾರ ತಮಿಳುನಾಡಿಗೆ ಹಾಗೂ CWRCಗೆ ಭಯಪಡುತ್ತಿದೆಯೇ’ ಎಂದು ಪ್ರಶ್ನಿಸಿದರು.

ನಾಲೆಗಳ ಆಧುನೀಕರಣದ ನೆಪದಲ್ಲಿ ರೈತರಿಗೆ ನೀರು ನೀಡಲಾಗುತ್ತಿಲ್ಲ. ತಾವು ಶಾಸಕರಾಗಿದ್ದ ಅವಧಿಯಲ್ಲಿ ನಾಲೆ ಅಭಿವೃದ್ಧಿಗೆ ₹100 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೆ. ಆಗ ಕೈಗೊಂಡಿದ್ದ ಕಾಮಗಾರಿಗಳನ್ನೇ ಈಗ ಮಾಡಲಾಗುತ್ತಿದೆ ಎಂದು ಹೇಳಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ಜಿಲ್ಲೆಯ ರೈತರಿಗೆ ಅನ್ನ ಹಾಕಿದರು. ನೀವು ರೈತರಿಗೆ ಮಣ್ಣು ಹಾಕುತ್ತಿದ್ದೀರಿ’ ಎಂದು ಕೃಷಿ ಮತ್ತು ಜಲಸಂಪನ್ಮೂಲ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಪುರಿಗಾಲಿ ಏತ ನೀರಾವರಿ ಯೋಜನೆಯ ಸ್ಥಿತಿಗತಿ ಕುರಿತು ಸರ್ಕಾರ ಸ್ಪಷ್ಟಪಡಿಸಬೇಕು. ಮಳವಳ್ಳಿ ತಾಲ್ಲೂಕಿನ ಕೆರೆಕಟ್ಟೆಗಳನ್ನು ತಕ್ಷಣ ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಸಹಕಾರ ಸಂಘಗಳಲ್ಲಿ ಭ್ರಷ್ಟಾಚಾರದ ಆರೋಪ:ಸಹಕಾರ ಸಂಘಗಳ ಚುನಾವಣೆಯನ್ನು ನಡೆಸದೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಸಂಘಗಳಲ್ಲಿ ಅಕ್ರಮ ಮತ್ತು ಲೂಟಿ ನಡೆಯುತ್ತಿದೆ ಎಂದು ಅನ್ನದಾನಿ ಆರೋಪಿಸಿದರು.

‘ಸಚಿವ ನರೇಂದ್ರಸ್ವಾಮಿ ಸಹಕಾರ ಸಂಘಗಳ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಅವರು ದೂರಿದರು. ಆಡಿಟ್ ವರದಿಯಲ್ಲಿ ₹65 ಲಕ್ಷದಷ್ಟು ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಹೇಳಿದ ಅವರು, ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ರೈತರಿಗೆ ಭಿತ್ತನೆ ಬೀಜ ಮತ್ತು ಗೊಬ್ಬರ ಸಮರ್ಪಕವಾಗಿ ದೊರೆಯುತ್ತಿಲ್ಲ. ಸಹಕಾರ ಸಂಘಗಳ ಚುನಾವಣೆಗಳನ್ನು ಶೀಘ್ರ ನಡೆಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

‘ರೈತರಿಲ್ಲದಿದ್ದರೆ ನಾವು ಅನ್ನ ತಿನ್ನಲು ಸಾಧ್ಯವಿಲ್ಲ. ಜಿಲ್ಲೆಯ ಕೃಷಿ ಮತ್ತು ನೀರಾವರಿ ಸಚಿವರು ಮಳವಳ್ಳಿ ತಾಲ್ಲೂಕಿನ ಕೆರೆಕಟ್ಟೆಗಳನ್ನು ತುಂಬಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಅನ್ನದಾನಿ ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande