

ಉಜ್ಜಯಿನಿ, 18 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಉಜ್ಜಯಿನಿ ಪ್ರವಾಸದ ಎರಡನೇ ದಿನವಾದ ಶುಕ್ರವಾರ ಗೀತಾ ಭವನದಲ್ಲಿ ಆಯೋಜಿಸಲಾಗಿರುವ ಯುವ ಧರ್ಮ ಸಂಸತ್-2026ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಗೀತರಚನೆಕಾರ ಮನೋಜ್ ಮುಂತಶಿರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಸೇವಾಜ್ಞ ಸಂಸ್ಥಾನಮ್ ವತಿಯಿಂದ ಸಿದ್ಧಪೀಠ ಹನುಮತ್ ನಿವಾಸ ಅಯೋಧ್ಯೆಯ ಪೀಠಾಧೀಶ್ವರ ಹಾಗೂ ಸಂರಕ್ಷಕ ಆಚಾರ್ಯ ಮಿಥಿಲೇಶನಂದಿನಿ ಶರಣ್ ಮಹಾರಾಜರ ಮಾರ್ಗದರ್ಶನದಲ್ಲಿ ಸೆ.17ರಿಂದ 19ರವರೆಗೆ ಕಾರ್ಯಕ್ರಮ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 1,700 ಯುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಎರಡನೇ ದಿನ ಸುಮಾರು 300 ವಿದ್ವಾಂಸರು, ಶಿಕ್ಷಕರು, ಸಂಶೋಧಕರು ಹಾಗೂ ಧರ್ಮಾಚಾರ್ಯರು ಪಾಲ್ಗೊಂಡಿದ್ದಾರೆ. ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಸೆ.19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಯುವ ಧರ್ಮ ಸಂಸತ್‌ನ ವಿಧ್ಯುಕ್ತ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮೋಹನ್ ಭಾಗವತ್, ಯುವಕರು ಧರ್ಮದ ಕುರಿತು ಚಿಂತನೆ ನಡೆಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
‘ಯುವ ಧರ್ಮ ಸಂಸತ್’ ಕುರಿತು ಕೇಳಿದಾಗ ಸಂತೋಷವಾಯಿತು. ಯುವಕರು ಧರ್ಮದ ಬಗ್ಗೆ ಯೋಚಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಚಾರಗಳನ್ನು ಕೇಳುವುದು ಕಡಿಮೆಯಾಗಿದೆ. ಧರ್ಮದ ಬಗ್ಗೆ ಮಾತನಾಡಿದಾಗಲೆಲ್ಲ ಕೆಲವರು ಧರ್ಮವೆಂದರೆ ವೃದ್ಧಾಪ್ಯದ ವಿಷಯ ಎಂದು ಭಾವಿಸುತ್ತಾರೆ ಎಂದು ಅವರು ಹೇಳಿದರು.
ಗೀತಾ ಮತ್ತು ರಾಮಾಯಣವನ್ನು ನಿವೃತ್ತಿಯ ನಂತರ ಓದುವ ಗ್ರಂಥಗಳೆಂದು ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಹಾಗಲ್ಲ. ಧರ್ಮವು ಜೀವನದ ಆರಂಭದಿಂದ ಅಂತ್ಯದವರೆಗೂ ಇರುತ್ತದೆ. ಎಲ್ಲವೂ ಅದರ ಅನುಸಾರವೇ ಸಾಗುತ್ತದೆ. ಅದನ್ನು ನಂಬಿದರೂ, ನಂಬದಿದ್ದರೂ ಕೆಲವು ವಿಚಾರಗಳು ನಿಯಮಗಳ ಪ್ರಕಾರವೇ ನಡೆಯುತ್ತವೆ ಎಂದು ಅವರು ಹೇಳಿದರು.
ಅಹಂಕಾರದಿಂದ ವ್ಯಕ್ತಿಯೊಬ್ಬ ಕೆಲಸ ಮಾಡುವಾಗ ಎಲ್ಲವೂ ತನ್ನ ನಿಯಂತ್ರಣದಲ್ಲಿದೆ, ತನ್ನ ಇಚ್ಛೆಯಂತೆ ನಡೆಯಬೇಕು ಎಂದು ಭಾವಿಸುತ್ತಾನೆ. ಆಗ ತಾನು ಬಯಸಿದಂತೆಯೇ ಎಲ್ಲವೂ ನಡೆಯುತ್ತದೆ ಎಂಬ ತಪ್ಪು ಕಲ್ಪನೆ ಉಂಟಾಗುತ್ತದೆ. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ ಎಂದು ಡಾ. ಭಾಗವತ್ ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾಜ್ಞ ಸಂಸ್ಥಾನಮ್‌ನ ಆಚಾರ್ಯ ಮಿಥಿಲೇಶನಂದಿನಿ ಶರಣ್ ಮಹಾರಾಜ್, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಗುರು ಪ್ರೊ. ಶ್ರೀನಿವಾಸ ವರ್ಖೇಡಿ ಹಾಗೂ ಸೇವಾಜ್ಞ ಸಂಸ್ಥಾನಮ್‌ನ ಅಧ್ಯಕ್ಷ ಆಶೀಷ್ ಕುಮಾರ್ ಆಶು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ‘ಧರ್ಮದ ಅಸ್ತಿತ್ವಪರ ಪರಿಕಲ್ಪನೆ ಮತ್ತು ಚಾರಿತ್ರಿಕ ಹೊಣೆಗಾರಿಕೆ’ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಆಚಾರ್ಯ ಮಹಾಮಂಡಲೇಶ್ವರ ಅವಧೇಶಾನಂದ ಗಿರಿ ಮಹಾರಾಜ್, ಗೀತರಚನೆಕಾರ ಮನೋಜ್ ಮುಂತಶಿರ್, ಪ್ರೊ. ಶ್ರೀನಿವಾಸ ವರ್ಖೇಡಿ, ಸ್ಮೃತಿ ಅನಂತಲಕ್ಷ್ಮಿ ಹಾಗೂ ಜೆ. ನಂದಕುಮಾರ್ ಅವರು ವಿಚಾರ ಮಂಡಿಸಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.