ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಮಸ್ತ ಚಟುವಟಿಕೆಗಳು ರಾಜ್ಯದಲ್ಲೇ ನಡೆಯಬೇಕು: ಎಂ.ಬಿ. ಪಾಟೀಲ್
ಸಮಸ್ತ ಚಟುವಟಿಕೆಗಳು ರಾಜ್ಯದಲ್ಲೇ ನಡೆಯಬೇಕು: ಎಂ.ಬಿ. ಪಾಟೀಲ್
Karnataka-Electronics-Sector-Activities-Must-Take-Place-Within-State-MB-Patil


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕರ್ನಾಟಕವನ್ನು ಜಾಗತಿಕ ಮಟ್ಟದ ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಮುಖ ತಾಣವನ್ನಾಗಿ ರೂಪಿಸುವ ಗುರಿ ಹೊಂದಿದ್ದು, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ವಿನ್ಯಾಸ, ಉತ್ಪಾದನೆ, ಪರೀಕ್ಷೆ ಹಾಗೂ ರಫ್ತು ಸೇರಿದಂತೆ ಸಮಸ್ತ ಚಟುವಟಿಕೆಗಳು ರಾಜ್ಯದಲ್ಲೇ ನಡೆಯುವಂತಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆದ ‘ಕರ್ನಾಟಕ ವಿದ್ಯುನ್ಮಾನ ನಾಯಕತ್ವ ಸಮಾವೇಶ’ದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಚಿಪ್ ವಿನ್ಯಾಸಕಾರರು ಹಾಗೂ 10 ಸಾವಿರಕ್ಕೂ ಅಧಿಕ ಅನಲಾಗ್ ಎಂಜಿನಿಯರ್ಗಳಿದ್ದಾರೆ. ಫಾಕ್ಸ್ಕಾನ್, ವಿಸ್ಟ್ರಾನ್, ಎಟಿ & ಎಸ್, ಅಪ್ಲೈಡ್ ಮೆಟೀರಿಯಲ್ಸ್, ಸೆಂಟಂ, ಕೇನ್ಸ್, ಟಾಟಾ ಎಲೆಕ್ಟ್ರಾನಿಕ್ಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಈಗಾಗಲೇ ರಾಜ್ಯದಲ್ಲಿ ನೆಲೆಯೂರಿವೆ ಎಂದು ಸಚಿವರು ತಿಳಿಸಿದರು.

“ರಾಜ್ಯವು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಪ್ರಮುಖ ತಾಣವಾಗಬೇಕು. ನಮ್ಮಲ್ಲೇ ವಿನ್ಯಾಸ, ಉತ್ಪಾದನೆ, ಪರೀಕ್ಷೆ ಮತ್ತು ರಫ್ತು ಸೇರಿದಂತೆ ಪ್ರತಿಯೊಂದು ಚಟುವಟಿಕೆಯೂ ನಡೆಯುವಂತೆ ಮಾಡುವುದು ಸರ್ಕಾರದ ಗುರಿ. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರ್ಕಾರ ನೀಡಲಿದೆ,” ಎಂದು ಎಂ.ಬಿ. ಪಾಟೀಲ್ ಹೇಳಿದರು.

ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ-ಧಾರವಾಡವನ್ನು ಎಲೆಕ್ಟ್ರಾನಿಕ್ಸ್ ಉದ್ಯಮದ ಕ್ಲಸ್ಟರ್ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಚಿಪ್ ವಿನ್ಯಾಸ ಕಂಪನಿಗಳಿದ್ದು, ದೇಶದ ಸುಮಾರು ಶೇ.55ರಷ್ಟು ಐಒಟಿ ನವೋದ್ಯಮಗಳು ಕರ್ನಾಟಕದಲ್ಲಿವೆ ಎಂದು ಅವರು ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ವಿದ್ಯುನ್ಮಾನ ವಿನ್ಯಾಸದಲ್ಲಿ ಕರ್ನಾಟಕದ ಪಾಲು ಶೇ.40ರಷ್ಟಿದ್ದು, ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ.10ರಷ್ಟಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಬಿಡಿಭಾಗಗಳ ತಯಾರಿಕೆ ಹಾಗೂ ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಬಲಪಡಿಸಲು ಎಂಎಸ್ಎಂಇಗಳು, ನವೋದ್ಯಮಗಳು ಮತ್ತು ಹೂಡಿಕೆದಾರರಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಚಿವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande