
ಕೋಲಾರ,18 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಕೆಲಸದ ಸ್ಥಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ದಿನಗೂಲಿ ಕಾರ್ಮಿಕ ಮಂಜುನಾಥ್ ಅವರ ಕುಟುಂಬಕ್ಕೆ ಐಪಿಪಿಬಿ ವಿಮೆಯ ೧೫ ಲಕ್ಷ ಅಪಘಾತ ಮರಣ ವಿಮಾ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು. ಟೇಕಲ್ನ ಪಟಾಲಮ್ಮ ಲಾರಿ ಚಾಲಕರು ಮತ್ತು ಕಾರ್ಮಿಕರ ಸಂಘದ ಆವರಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮೃತರ ಪತ್ನಿ ಅರುಣಾ ಅವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ಮಂಜುನಾಥ್ ಅವರು ಸಂಘದ ಆವರಣದಲ್ಲಿ ಈ ಹಿಂದೆ ನಡೆದಿದ್ದ ವಿಶೇಷ ವಿಮಾ ಅಭಿಯಾನದ ಸಂದರ್ಭದಲ್ಲಿ ಸ್ಟಾರ್ ಹೆಲ್ತ್ ಆಕ್ಸಿಡೆಂಟಲ್ ಇನ್ಶೂರೆನ್ಸ್ ಯೋಜನೆಗೆ ನೋಂದಾಯಿಸಿಕೊAಡಿದ್ದರು. ಕಾರ್ಮಿಕರ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ ಸಂಘದ ಅಧ್ಯಕ್ಷ ಬಾಲಾಜಿ ಅವರು ವೈಯಕ್ತಿಕ ಆಸಕ್ತಿ ವಹಿಸಿ ಕಾರ್ಮಿಕರನ್ನು ವಿಮಾ ಯೋಜನೆಗೆ ನೋಂದಾಯಿಸಿದ್ದರು.
ಅಪಘಾತದ ಬಳಿಕ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇತೃತ್ವದಲ್ಲಿ ವಿಮಾ ಕ್ಲೈಮ್ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗಿದ್ದು, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಪರಿಹಾರ ದೊರಕುವಂತೆ ಮಾಡಲಾಗಿದೆ. ಕೋಲಾರ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಕೃಷ್ಣ ಎಂ. ಅವರ ಮಾರ್ಗದರ್ಶನದಲ್ಲಿ ಕ್ಲೈಮ್ ಇತ್ಯರ್ಥ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೋಲಾರ ಅಂಚೆ ಉಪ ಅಧೀಕ್ಷಕ ದಯಾನಂದ್, ಅನಿರೀಕ್ಷಿತ ಅಪಘಾತಗಳು ಸಂಭವಿಸಿದಾಗ ಗ್ರೂಪ್ ಆಕ್ಸಿಡೆಂಟಲ್ ಗಾರ್ಡ್ ಸೇರಿದಂತೆ ಅಪಘಾತ ವಿಮಾ ಯೋಜನೆಗಳು ಬಡ ಹಾಗೂ ಕಾರ್ಮಿಕ ವರ್ಗದ ಕುಟುಂಬಗಳಿಗೆ ಆರ್ಥಿಕ ರಕ್ಷಣಾ ಕವಚವಾಗುತ್ತವೆ. ಪ್ರತಿಯೊಬ್ಬ ಕಾರ್ಮಿಕರೂ ಇಂತಹ ವಿಮಾ ಯೋಜನೆಗಳ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಟೇಕಲ್ ರಮೇಶ್ಗೌಡ ಅವರು ಮೃತ ಮಂಜುನಾಥ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ, ಕಾರ್ಮಿಕ ಸಮುದಾಯದ ಕಲ್ಯಾಣಕ್ಕಾಗಿ ಜಿಲ್ಲಾದ್ಯಂತ ಇಂತಹ ವಿಮಾ ಜಾಗೃತಿ ಹಾಗೂ ಕ್ಲೈಮ್ ಇತ್ಯರ್ಥ ಶಿಬಿರಗಳನ್ನು ಆಯೋಜಿಸಲು ಅಗತ್ಯ ಆಡಳಿತಾತ್ಮಕ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಅಂಚೆ ಅಧೀಕ್ಷಕ ಕೃಷ್ಣ ಎಂ. ಅಂಚೆ ಉಪ ಅಧೀಕ್ಷಕ ದಯಾನಂದ್, ಐಪಿಪಿಬಿ ದಕ್ಷಿಣ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಸುಬ್ಬರಾವ್, ಐಪಿಪಿಬಿ ಕೋಲಾರ ಶಾಖಾ ವ್ಯವಸ್ಥಾಪಕಿ ಸಂಗೀತ ಜಯರಾಮ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪ್ರತಿನಿಧಿ ವಿಜಯ್, ಲಾರಿ ಚಾಲಕರು ಮತ್ತು ಕಾರ್ಮಿಕರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್