ಸೂರಿಲ್ಲದ ಪತ್ರಕರ್ತರಿಗೆ ನಿವೇಶನಗಳ ಮಂಜೂರಾತಿಗೆ ಜಿಲ್ಲಾಧಿಕಾರಿಗಳ ಭರವಸೆ
ಪತ್ರಕರ್ತರಿಗೆ ನಿವೇಶನಗಳ ಮಂಜೂರಾತಿಗೆ ಜಿಲ್ಲಾಧಿಕಾರಿಗಳ ಭರವಸೆ
ಕೋಲಾರದಲ್ಲಿ ಆರೆಂಜ್ ಆರ್ಮಿ ಟ್ರಸ್ಟ್ನಿಂದ ಜಿಲ್ಲಾಧಿಕಾರಿ ಎಂ.ಆರ್. ರವಿ ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸಿದರು.


ಕೋಲಾರ, 18 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಜಿಲ್ಲೆಯ ಪತ್ರಕರ್ತರ ಬಹುದಿನಗಳ ಬೇಡಿಕೆಯಾದ ನಿವೇಶನ ಮಂಜೂರಾತಿ ಪ್ರಕ್ರಿಯೆಯನ್ನು ಕೇವಲ ಒಂದು ವಾರದೊಳಗೆ ಪೂರ್ಣಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಭರವಸೆ ನೀಡಿದ್ದಾರೆ.

ಕೋಲಾರದಲ್ಲಿ 'ಆರೆಂಜ್ ಆರ್ಮಿ ಟ್ರಸ್ಟ್' ವತಿಯಿಂದ ಆಯೋಜಿಸಿದ್ದ ೫೦ಕ್ಕೂ ಹೆಚ್ಚು ಪತ್ರಕರ್ತರಿಗೆ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದಲ್ಲಿ ಸಂವಿಧಾನದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಸರ್ಕಾರದ ಆದೇಶಗಳು ಮತ್ತು ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದಿನನಿತ್ಯ ಸುದ್ದಿ ಸಂಗ್ರಹಣೆಗಾಗಿ ಓಡಾಡುವ ಪತ್ರಕರ್ತರ ಸುರಕ್ಷತೆಗಾಗಿ ಹೆಲ್ಮೆಟ್ ವಿತರಿಸುತ್ತಿರುವ ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದರು.

ಪತ್ರಕರ್ತರ ಬಹುದಿನಗಳ ಬೇಡಿಕೆಯಾದ 'ಪತ್ರಕರ್ತರ ಸಹಕಾರ ಸಂಘ'ದ ಸ್ಥಾಪನೆಗಾಗಿ ಒಂದು ವಾರದೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಡುವುದರ ಜೊತೆಗೆ, ಸಂಘಕ್ಕೆ ನಿವೇಶನ ಮಂಜೂರು ಮಾಡುವ ಪ್ರಕ್ರಿಯೆಯನ್ನು ಸಹ ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಇದೇ ವೇಳೆ ರೈತರ ಬರಗಾಲ ಬೆಲೆ ಪರಿಹಾರದ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ರೈತರಿಗೆ ವಿಮಾ ಕಂಪನಿಯಿಂದ ಈಗಾಗಲೇ ೨೯ ಕೋಟಿ ರೂ. ಪರಿಹಾರ ಒದಗಿಸಲಾಗಿದ್ದು, ಜಿಲ್ಲಾಡಳಿತ ಸದಾ ರೈತರ ಬೆಂಬಲಕ್ಕೆ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೋಲಾರ-ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧ ಉದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಎಸ್. ಗಣೇಶ್, ಸಂಘವು ಆರ್ಥಿಕವಾಗಿ ಹಿಂದುಳಿದ ಪತ್ರಕರ್ತರಿಗೆ ತ್ವರಿತ ಸಾಲ ಸೌಲಭ್ಯ ಒದಗಿಸುತ್ತಿದ್ದು, ಶೇ.೯೦ರಷ್ಟು ಮರುಪಾವತಿಯಾಗುತ್ತಿದೆ. ಅಲ್ಲದೆ, ಯಶಸ್ವಿನಿ ಯೋಜನೆಯಡಿ ೮೦ಕ್ಕೂ ಹೆಚ್ಚು ಪತ್ರಕರ್ತರ ಕುಟುಂಬಗಳು ನೋಂದಣಿಯಾಗಿದ್ದು, ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಯುವಕರಿಂದ ಆರಂಭವಾದ ಆರೆಂಜ್ ಆರ್ಮಿ ಟ್ರಸ್ಟ್ನ ವಿದ್ಯಾರ್ಥಿ ವೇತನ, ಕ್ರೀಡಾ ಪ್ರೋತ್ಸಾಹ ಹಾಗೂ ಅನ್ನದಾನದಂತಹ ಸಮಾಜಮುಖಿ ಕಾರ್ಯಗಳನ್ನು ಅವರು ವಿವರಿಸಿದರು.

ಖಜಾಂಚಿ ರಾಜೇಂದ್ರ ಸಿಂಹ ಮಾತನಾಡಿ, ಸಾರ್ವಜನಿಕರ ದೂರುಗಳಿಗೆ ಸ್ಥಳದಲ್ಲೇ ಸ್ಪಂದಿಸುವ, ಕೆರೆ ಒತ್ತುವರಿಯಂತಹ ಪ್ರಕರಣಗಳಲ್ಲಿ ತ್ವರಿತ ಆದೇಶ ನೀಡುವ ಮೂಲಕ ಜಿಲ್ಲಾಡಳಿತದಲ್ಲಿ ಚುರುಕುತನ ತಂದಿರುವ ಜಿಲ್ಲಾಧಿಕಾರಿಗಳ ದಕ್ಷ ಹಾಗೂ ಜನಪರ ಆಡಳಿತವನ್ನು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್, ಆರೆಂಜ್ ಆರ್ಮಿ ಟ್ರಸ್ಟ್ನ ವ್ಯವಸ್ಥಾಪಕ ಹರೀಶ್, ಕಾರ್ಯದರ್ಶಿ ಶಂಕರ್, ಮಂಜೇಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷರಾದ ತ್ಯಾಗರಾಜ್, ಮೋಹನ್, ಸಂಪಾದಕರ ಸಂಘದ ಅಧ್ಯಕ್ಷರಾದ ಮುರಳೀಧರ್, ಜಯದೇವ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande