ಬೆಂಗಳೂರಲ್ಲಿ ಗ್ಯಾಂಗ್ ವರ್ಕ್ ಸ್ವಚ್ಛತಾ ಅಭಿಯಾನ; ಹಸಿ-ಒಣ ಕಸ ಬೇರ್ಪಡಿಸದಿದ್ದರೆ ದಂಡ
ಹಸಿ-ಒಣ ಕಸ ಬೇರ್ಪಡಿಸದಿದ್ದರೆ ದಂಡ
GBA-gang-work-cleaning-drive-in-bengaluru-fine-for-not-segregating-wet-and-dry-waste


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲಾಗಿದ್ದು, ‘ಗ್ಯಾಂಗ್ ವರ್ಕ್’ ಮೂಲಕ ಬ್ಲಾಕ್ಸ್ಪಾಟ್ಗಳು, ಪಾದಚಾರಿ ಮಾರ್ಗಗಳು ಹಾಗೂ ರಸ್ತೆ ಬದಿಗಳಲ್ಲಿನ ತ್ಯಾಜ್ಯ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸದೆ ಮಿಶ್ರ ಕಸ ನೀಡುವ ಮನೆಗಳ ವಿರುದ್ಧ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಎಚ್ಎಸ್ಆರ್ ಲೇಔಟ್ ಮತ್ತು ಸಿಂಗಸಂದ್ರ ವಾರ್ಡ್ಗಳಲ್ಲಿ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಸ್ಥಳ ಪರಿಶೀಲನೆ ನಡೆಸಿ ಸ್ವಚ್ಛತಾ ಕಾರ್ಯಗಳ ಪ್ರಗತಿ ಪರಿಶೀಲಿಸಿದರು.

ಎಚ್ಎಸ್ಆರ್ ಲೇಔಟ್ನ 19ನೇ ಮುಖ್ಯ ರಸ್ತೆ, ಬಿಎಂಟಿಸಿ ಬಸ್ ಡಿಪೋ ಹಿಂಭಾಗ ಸೇರಿದಂತೆ ಪ್ರಮುಖ ಹಾಗೂ ಉಪಪ್ರಮುಖ ರಸ್ತೆಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಮನೆ-ಮನೆ ಕಸ ಸಂಗ್ರಹಣೆ ಬಳಿಕ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಪೌರಕಾರ್ಮಿಕರು, ಕಸ ಸಂಗ್ರಹಣಾ ಆಟೋ ಚಾಲಕರು ಮತ್ತು ಸಹಾಯಕರು ತಂಡವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ತಂಡಗಳು ರಸ್ತೆ ಬದಿ, ಬ್ಲಾಕ್ಸ್ಪಾಟ್ಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿನ ತ್ಯಾಜ್ಯ ತೆರವುಗೊಳಿಸಲಿದ್ದು, ಕೆರೆ ಮತ್ತು ಉದ್ಯಾನ ಪ್ರದೇಶಗಳಲ್ಲಿನ ಹೂಳು ಹಾಗೂ ಒಣ ಎಲೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ.

ಹಸಿ-ಒಣ ಕಸ ಪ್ರತ್ಯೇಕಿಸಿ:ಮಿಶ್ರ ಕಸದಿಂದ ತ್ಯಾಜ್ಯ ವಿಂಗಡಣೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂಬ ಕಸ ಸಂಗ್ರಹಣಾ ಸಿಬ್ಬಂದಿಯ ಮನವಿಯ ಹಿನ್ನೆಲೆಯಲ್ಲಿ, ನಾಗರಿಕರು ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ನೀಡುವಂತೆ ಆಯುಕ್ತರು ಸೂಚಿಸಿದ್ದಾರೆ.

ನಿಯಮ ಉಲ್ಲಂಘಿಸಿ ಮಿಶ್ರ ಕಸ ನೀಡುವ ಮನೆಗಳಿಗೆ ಮಾರ್ಷಲ್ಗಳ ಮೂಲಕ ಸ್ಥಳದಲ್ಲೇ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಿಂಗಸಂದ್ರ ವಾರ್ಡ್ನ ಕಸ ಕಿಯೋಸ್ಕ್ ಪರಿಶೀಲಿಸಿದ ಆಯುಕ್ತರು, ಸಮಯದ ಅಭಾವದಿಂದ ಮನೆ ಮುಂದೆ ಬರುವ ಕಸ ಸಂಗ್ರಹಣಾ ವಾಹನಕ್ಕೆ ಕಸ ನೀಡಲು ಸಾಧ್ಯವಾಗದವರು ವಿಂಗಡಿಸಿದ ಕಸವನ್ನು ಕಿಯೋಸ್ಕ್ಗೆ ನೀಡಬಹುದು ಎಂದು ತಿಳಿಸಿದ್ದಾರೆ.

ಈ ಕಿಯೋಸ್ಕ್ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸುತ್ತದೆ.“ನಾಗರಿಕರು ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ನೀಡಬೇಕು.

ಮಿಶ್ರ ಕಸ ನೀಡುವ ಮನೆಗಳ ವಿರುದ್ಧ ಮಾರ್ಷಲ್ಗಳ ಮೂಲಕ ಸ್ಥಳದಲ್ಲೇ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೆ.ಎನ್. ರಮೇಶ್, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಸಿಂಗಸಂದ್ರದ ಕಸ ವರ್ಗಾವಣೆ ಕೇಂದ್ರವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದ್ದು, ದುರ್ವಾಸನೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande