ಶಿಷ್ಟಾಚಾರ ಉಲ್ಲಂಘನೆ: ಇಬ್ಬರು ಆರೋಗ್ಯ ಇಲಾಖೆ ಅಧಿಕಾರಿಗಳು ಅಮಾನತು
ಇಬ್ಬರು ಆರೋಗ್ಯ ಇಲಾಖೆ ಅಧಿಕಾರಿಗಳು ಅಮಾನತು
Bidar-Protocol-Violation-DHO-THO-Suspended-Over-UT-Khader-Photo-Issue


ಬೀದರ್, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಹಾಗೂ ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸೆ.16ರಂದು ನಡೆದ ಆಸ್ಪತ್ರೆ ಕಟ್ಟಡ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ನಿಯಮಗಳನ್ನು ಪಾಲಿಸದ ಆರೋಪದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ಹಾಗೂ ಬಸವಕಲ್ಯಾಣ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ ಅವರನ್ನು ಅಮಾನತು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ಆರೋಗ್ಯ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದ ಬ್ಯಾನರ್ನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಫೋಟೋ ಬಳಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂಬುದು ಆರೋಪವಾಗಿದೆ.

ಕಾರ್ಯಕ್ರಮದ ಸಿದ್ಧತೆ ವೇಳೆ ಸಚಿವರ ಫೋಟೋ ಬಳಕೆ ಸೇರಿದಂತೆ ಪ್ರೋಟೋಕಾಲ್ ಪಾಲಿಸುವಂತೆ ಸೂಚನೆ ನೀಡಲಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಥಳೀಯ ಶಾಸಕ ಶರಣು ಸಲಗರ್ ಅವರ ಸೂಚನೆಯಂತೆ ಸಚಿವರ ಫೋಟೋ ಬಳಸದೆ ಬ್ಯಾನರ್ ಅಳವಡಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಅವರ ಸೂಚನೆಗಳನ್ನೂ ಅಧಿಕಾರಿಗಳು ಪಾಲಿಸಿರಲಿಲ್ಲ ಎಂದು ಹೇಳಲಾಗಿದೆ.

ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ನಿಯಮಗಳನ್ನು ಪಾಲಿಸುವುದು ಅಧಿಕಾರಿಗಳ ಕರ್ತವ್ಯ. ಪ್ರೋಟೋಕಾಲ್ ಉಲ್ಲಂಘನೆ ಹಾಗೂ ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ತಿಳಿಸಿದೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande