ವಾಯುಪಡೆಗೆ 2 ತೇಜಸ್, 3 ಎಚ್ಟಿಟಿ-40; ಪವನ್ ಹನ್ಸ್ಗೆ 4 ಧ್ರುವ್ ಎನ್ಜಿ ಹೆಲಿಕಾಪ್ಟರ್ ಹಸ್ತಾಂತರ
ಆತ್ಮನಿರ್ಭರತೆಯತ್ತ ಭಾರತದ ಪ್ರಗತಿಯಲ್ಲಿ ಇದು ಮಹತ್ವದ ಮೈಲುಗಲ್ಲು ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು.
ವಾಯುಪಡೆಗೆ 2 ತೇಜಸ್, 3 ಎಚ್ಟಿಟಿ-40; ಪವನ್ ಹನ್ಸ್ಗೆ 4 ಧ್ರುವ್ ಎನ್ಜಿ ಹೆಲಿಕಾಪ್ಟರ್ ಹಸ್ತಾಂತರ


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಭಾರತೀಯ ವಾಯುಪಡೆಗೆ ಎರಡು ತೇಜಸ್ ಅಂತಿಮ ಕಾರ್ಯಾಚರಣಾ ಅನುಮೋದನೆ (ಎಫ್‌ಒಸಿ) ಎರಡು ಆಸನದ ತರಬೇತಿ ವಿಮಾನಗಳು ಹಾಗೂ ಮೂರು ಎಚ್‌ಟಿಟಿ-40 ಮೂಲ ತರಬೇತಿ ವಿಮಾನಗಳನ್ನು, ಪವನ್ ಹನ್ಸ್ ಲಿಮಿಟೆಡ್‌ಗೆ ನಾಲ್ಕು ಧ್ರುವ್ ಮುಂದಿನ ತಲೆಮಾರಿನ (ಎನ್‌ಜಿ) ಹೆಲಿಕಾಪ್ಟರ್‌ಗಳನ್ನು ಶುಕ್ರವಾರ ಹಸ್ತಾಂತರಿಸಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹಸ್ತಾಂತರ ನಡೆಯಿತು. ಸ್ವದೇಶಿ ವೈಮಾನಿಕ ಸಾಮರ್ಥ್ಯ, ತಾಂತ್ರಿಕ ಆತ್ಮವಿಶ್ವಾಸ ಮತ್ತು ಆತ್ಮನಿರ್ಭರತೆಯತ್ತ ಭಾರತದ ಪ್ರಗತಿಯಲ್ಲಿ ಇದು ಮಹತ್ವದ ಮೈಲುಗಲ್ಲು ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು.

ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಇಂದಿನ ಅಗತ್ಯವಾಗಿದೆ. ಅತ್ಯಾಧುನಿಕ ಉಪಕರಣಗಳನ್ನು ದೇಶೀಯವಾಗಿ ತಯಾರಿಸುವತ್ತ ಭಾರತ ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ. ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳ ಜೊತೆಗೆ ಖಾಸಗಿ ಉದ್ಯಮಕ್ಕೂ ಅವಕಾಶ ಕಲ್ಪಿಸಿ ಸಮಾನ ಅವಕಾಶದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ವೈಮಾನಿಕ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಏಕಾಏಕಿ ದೊಡ್ಡ ಬದಲಾವಣೆ ಸಾಧ್ಯವಿಲ್ಲ. ಇದು ಹಲವು ಘಟಕಗಳು ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿರುವ ವಿಶಾಲ ಹಾಗೂ ಹಂತ ಹಂತವಾಗಿ ಸಾಗುವ ಪ್ರಕ್ರಿಯೆಯಾಗಿದೆ. ಪ್ರತಿಯೊಂದು ಉತ್ಪನ್ನ ಮತ್ತು ಘಟಕವೂ ದೀರ್ಘ ಪ್ರಗತಿಯ ಮೆಟ್ಟಿಲಿನ ಒಂದು ಹಂತವಾಗಿದ್ದು, ಸವಾಲುಗಳನ್ನು ಪ್ರಗತಿಯ ಮಾರ್ಗಸೂಚಿಯ ಭಾಗವಾಗಿ ಪರಿಗಣಿಸಿ ಮುನ್ನಡೆಯಬೇಕು ಎಂದು ಅವರು ತಿಳಿಸಿದರು.

ರಕ್ಷಣಾ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಗಳ ಸಾಮರ್ಥ್ಯಗಳನ್ನು ಒಗ್ಗೂಡಿಸುವ ಸಮಗ್ರ ವೈಮಾನಿಕ ಪರಿಸರ ವ್ಯವಸ್ಥೆ ನಿರ್ಮಿಸಬೇಕಿದೆ. ವಿಮಾನ ವಿನ್ಯಾಸ, ಏವಿಯಾನಿಕ್ಸ್, ಚಾಲನಾ ವ್ಯವಸ್ಥೆ, ಸಂಯೋಜಿತ ವಸ್ತುಗಳು, ಹಾರಾಟ ನಿಯಂತ್ರಣ ವ್ಯವಸ್ಥೆಗಳು, ಉತ್ಪಾದನೆ ಮತ್ತು ಪ್ರಮಾಣೀಕರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ದೇಶೀಯ ಸಾಮರ್ಥ್ಯ ಬೆಳೆಸಬೇಕು ಎಂದು ರಾಜನಾಥ್ ಸಿಂಗ್ ಕರೆ ನೀಡಿದರು.

ಭವಿಷ್ಯದ ಯುದ್ಧ ಕಾರ್ಯಾಚರಣೆಗಳು ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತವಾಗಿರಲಿವೆ. ಉತ್ತಮ ತರಬೇತಿ ಪಡೆದ ಸಿಬ್ಬಂದಿ, ಅತ್ಯಾಧುನಿಕ ತಂತ್ರಜ್ಞಾನ, ಸಮಗ್ರ ವ್ಯವಸ್ಥೆಗಳು ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯದ ಸಂಯೋಜನೆಯಿಂದ ಮಾತ್ರ ಯುದ್ಧ ಸಾಮರ್ಥ್ಯ ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ತೇಜಸ್ ಎಫ್‌ಒಸಿ ತರಬೇತಿ ವಿಮಾನವು ಪೈಲಟ್‌ಗಳ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಧ್ರುವ್ ಎನ್‌ಜಿ ದೇಶೀಯ ನಾಗರಿಕ ವೈಮಾನಿಕ ಸಾಮರ್ಥ್ಯದ ಪ್ರತೀಕವಾಗಿದ್ದರೆ, ತೇಜಸ್ ಎಫ್‌ಒಸಿ ತರಬೇತಿ ವಿಮಾನವು ದೇಶೀಯ ಮಿಲಿಟರಿ ವೈಮಾನಿಕ ಸಾಮರ್ಥ್ಯ ಮತ್ತು ಯುದ್ಧವಿಮಾನ ಪರಿಸರ ವ್ಯವಸ್ಥೆಯ ಪ್ರಬುದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.

ಭಾರತ ಹಲವು ವರ್ಷಗಳಿಂದ ಮೂಲ ತರಬೇತಿ ಅಗತ್ಯಗಳಿಗಾಗಿ ಆಮದು ಮಾಡಿಕೊಂಡ ವಿಮಾನಗಳ ಮೇಲೆ ಅವಲಂಬಿತವಾಗಿತ್ತು. ಇದೀಗ ಎಚ್‌ಎಎಲ್ ದೇಶೀಯವಾಗಿ ಎಚ್‌ಟಿಟಿ-40 ವಿಮಾನವನ್ನು ತಯಾರಿಸುತ್ತಿದ್ದು, ಭಾರತೀಯ ವಾಯುಪಡೆಯ ತರಬೇತಿ ಅಗತ್ಯಗಳನ್ನು ಪೂರೈಸಲು ಇದು ನೆರವಾಗಲಿದೆ. ಈ ವಿಮಾನಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬೇಡಿಕೆ ಸೃಷ್ಟಿಯಾಗುವ ವಿಶ್ವಾಸವಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ವಿಮಾನ ತಯಾರಿಕೆ, ಹೆಲಿಕಾಪ್ಟರ್ ಅಭಿವೃದ್ಧಿ, ಪುನರ್‌ಪರಿಶೀಲನೆ, ದುರಸ್ತಿ, ನಿರ್ವಹಣೆ ಹಾಗೂ ವೈಮಾನಿಕ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಎಚ್‌ಎಎಲ್ ಹೊಂದಿರುವ ಪರಿಣತಿ ದೇಶೀಯ ವೈಮಾನಿಕ ಸಾಮರ್ಥ್ಯ ನಿರ್ಮಾಣದ ಪ್ರಮುಖ ಆಧಾರವಾಗಿದೆ. ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಪ್ರಮಾಣೀಕರಣ, ಜೀವನಚಕ್ರ ಬೆಂಬಲ ಮತ್ತು ಜಾಗತಿಕ ಮಾರುಕಟ್ಟೆ ಸೇರಿದಂತೆ ಸಂಪೂರ್ಣ ವೈಮಾನಿಕ ಮೌಲ್ಯ ಸರಪಳಿಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಅವರು ಹೇಳಿದರು.

ತಾಂತ್ರಿಕ ಯೋಜನೆಗಳ ವಿಳಂಬವನ್ನು ತಪ್ಪಿಸಲು ವಾಸ್ತವಿಕ ಯೋಜನಾ ಕಾಲಮಿತಿಗಳನ್ನು ನಿಗದಿಪಡಿಸಬೇಕು. ವಿಳಂಬದಿಂದ ಪ್ರಮುಖ ರಕ್ಷಣಾ ಅಗತ್ಯಗಳನ್ನು ಪೂರೈಸುವಲ್ಲಿ ಅಂತರ ಉಂಟಾಗುವುದರ ಜತೆಗೆ ವೆಚ್ಚ ಹೆಚ್ಚಳ ಮತ್ತು ತಂತ್ರಜ್ಞಾನ ಹಳೆಯದಾಗುವ ಅಪಾಯವೂ ಎದುರಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಕರೆ ನೀಡಿದ ರಾಜನಾಥ್ ಸಿಂಗ್, ಯುವ ವಿಜ್ಞಾನಿಗಳು, ಎಂಜಿನಿಯರ್‌ಗಳು, ವಿನ್ಯಾಸಕರು, ಪರೀಕ್ಷಾ ಪೈಲಟ್‌ಗಳು ಹಾಗೂ ತಂತ್ರಜ್ಞರು ಪ್ರಸ್ತುತ ಅಸ್ತಿತ್ವದಲ್ಲಿಲ್ಲದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಸವಾಲನ್ನು ಸ್ವೀಕರಿಸಬೇಕು ಎಂದರು. ಮುಂದಿನ ದಶಕದಲ್ಲಿ ಜಾಗತಿಕ ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿ ಸ್ಥಾನ ಪಡೆಯುವಂತಹ ಸಾಮರ್ಥ್ಯಗಳನ್ನು ಬೆಳೆಸಬೇಕು ಎಂದು ಅವರು ಹೇಳಿದರು.

ಸಾರ್ವಜನಿಕ ಮತ್ತು ಖಾಸಗಿ ವಲಯಗಳನ್ನು ಪರಸ್ಪರ ಸ್ಪರ್ಧಿಗಳೆಂದು ಪರಿಗಣಿಸದೆ ಸಹಭಾಗಿಗಳಾಗಿ ಕಾರ್ಯನಿರ್ವಹಿಸಬೇಕು. ಕೃತಕ ಬುದ್ಧಿಮತ್ತೆ, ಸ್ವಾಯತ್ತ ವ್ಯವಸ್ಥೆಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು, ವಿದ್ಯುನ್ಮಾನ ಯುದ್ಧ ತಂತ್ರಜ್ಞಾನ, ಸೈಬರ್ ತಂತ್ರಜ್ಞಾನ ಮತ್ತು ಮುಂದಿನ ತಲೆಮಾರಿನ ಚಾಲನಾ ವ್ಯವಸ್ಥೆಗಳಂತಹ ಕ್ಷೇತ್ರಗಳಲ್ಲಿ ದೇಶೀಯ ಅಭಿವೃದ್ಧಿ ಹಾಗೂ ಸಮನ್ವಯಕ್ಕೆ ಒತ್ತು ನೀಡಬೇಕು ಎಂದು ಅವರು ಹೇಳಿದರು.

ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮಾತನಾಡಿ, ಧ್ರುವ್ ಎನ್‌ಜಿ ಹೆಲಿಕಾಪ್ಟರ್‌ಗೆ ಪ್ರಮಾಣೀಕರಣ ದೊರೆತು ನಾಗರಿಕ ಕಾರ್ಯಾಚರಣೆಗೆ ಸೇರ್ಪಡೆಯಾಗಿರುವುದು ಭಾರತದ ದೇಶೀಯ ನಾಗರಿಕ ವಿಮಾನಯಾನ ಪರಿಸರ ವ್ಯವಸ್ಥೆಯ ಪ್ರಮುಖ ಮೈಲುಗಲ್ಲಾಗಿದೆ. ವಾಣಿಜ್ಯ ಬಳಕೆಗೆ ಅಗತ್ಯವಿರುವ ಸುಧಾರಿತ ವೈಮಾನಿಕ ವೇದಿಕೆಗಳನ್ನು ಅಭಿವೃದ್ಧಿಪಡಿಸಿ ಬೆಂಬಲಿಸುವ ಭಾರತೀಯ ಉದ್ಯಮದ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಇದು ಪ್ರತಿಬಿಂಬಿಸುತ್ತದೆ ಎಂದರು.

ಎಚ್‌ಎಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರವಿ ಕೆ. ಮಾತನಾಡಿ, ತೇಜಸ್ ಎಫ್‌ಒಸಿ ಎರಡು ಆಸನದ ತರಬೇತಿ ವಿಮಾನಗಳು, ಎಚ್‌ಟಿಟಿ-40 ಮೂಲ ತರಬೇತಿ ವಿಮಾನಗಳು ಮತ್ತು ಧ್ರುವ್ ಎನ್‌ಜಿ ಹೆಲಿಕಾಪ್ಟರ್‌ಗಳ ಹಸ್ತಾಂತರವು ನಾಗರಿಕ ಹಾಗೂ ರಕ್ಷಣಾ ಕ್ಷೇತ್ರಗಳ ವೈವಿಧ್ಯಮಯ ಅಗತ್ಯಗಳಿಗೆ ವೇದಿಕೆಗಳನ್ನು ಅಭಿವೃದ್ಧಿಪಡಿಸಿ ಪೂರೈಸುವ ಎಚ್‌ಎಎಲ್ ಸಾಮರ್ಥ್ಯವನ್ನು ತೋರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಸಂಜೀವ್ ಕುಮಾರ್ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಉಪಸ್ಥಿತರಿದ್ದರು.

ತೇಜಸ್ ತರಬೇತಿ ವಿಮಾನ: ಎಫ್‌ಒಸಿ ಒಪ್ಪಂದದಡಿ ನೀಡಬೇಕಿದ್ದ ಕೊನೆಯ ಎರಡು ಎರಡು ಆಸನದ ತರಬೇತಿ ವಿಮಾನಗಳನ್ನು ಇದೀಗ ಹಸ್ತಾಂತರಿಸಲಾಗಿದೆ. ಭಾರತೀಯ ವಾಯುಪಡೆಯ ತರಬೇತಿ ಅಗತ್ಯಗಳನ್ನು ಪೂರೈಸುವ ಈ ವಿಮಾನಗಳು ಮುಂಚೂಣಿ ಯುದ್ಧವಿಮಾನ ಕಾರ್ಯಾಚರಣೆಗಳಿಗೆ ಪೈಲಟ್‌ಗಳನ್ನು ಸಿದ್ಧಗೊಳಿಸಲಿವೆ. ಮುಂಚೂಣಿ ಯುದ್ಧವಿಮಾನದಲ್ಲಿರುವ ಪ್ರಮುಖ ವ್ಯವಸ್ಥೆಗಳು ಮತ್ತು ಯುದ್ಧ ಸಾಮರ್ಥ್ಯವನ್ನು ತೇಜಸ್ ತರಬೇತಿ ವಿಮಾನವೂ ಹೊಂದಿದ್ದು, ಪೈಲಟ್‌ಗಳು ಸೇವೆಯಲ್ಲಿ ಮುಂದಿನ ಹಂತದಲ್ಲಿ ಹಾರಿಸಲಿರುವ ವಿಮಾನದಲ್ಲೇ ತರಬೇತಿ ಪಡೆಯಲು ಇದು ನೆರವಾಗಲಿದೆ.

ಎಚ್‌ಟಿಟಿ-40: ರಕ್ಷಣಾ ಪಡೆಗಳ ಮೂಲ ತರಬೇತಿ ಅಗತ್ಯಗಳನ್ನು ಪೂರೈಸಲು ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಮೂಲ ತರಬೇತಿ ವಿಮಾನ ಇದಾಗಿದೆ. ಟರ್ಬೋಪ್ರಾಪ್ ಎಂಜಿನ್ ಆಧಾರಿತ ಈ ವಿಮಾನವು ಕಡಿಮೆ ವೇಗದಲ್ಲಿ ಉತ್ತಮ ನಿಯಂತ್ರಣ ಸಾಮರ್ಥ್ಯ ಹೊಂದಿದ್ದು, ತರಬೇತಿ ಪಡೆಯುವ ಪೈಲಟ್‌ಗಳಿಗೆ ಪರಿಣಾಮಕಾರಿ ತರಬೇತಿ ನೀಡಲು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಕಾಕ್‌ಪಿಟ್ ಮತ್ತು ಏವಿಯಾನಿಕ್ಸ್ ವ್ಯವಸ್ಥೆ ಹೊಂದಿರುವ ವಿಮಾನವು ಸಾಹಸ ಹಾರಾಟ, ಸಾಮಾನ್ಯ ಹಾರಾಟ ನಿರ್ವಹಣೆ, ಸಾಧನ ಆಧಾರಿತ ಹಾರಾಟ, ದಿಕ್ಕು ನಿರ್ಣಯ, ರಾತ್ರಿ ಹಾರಾಟ ಹಾಗೂ ಸಮೀಪದ ಗುಂಪು ಹಾರಾಟ ಸೇರಿದಂತೆ ವಿವಿಧ ಮೂಲ ತರಬೇತಿ ಮತ್ತು ಹಾರಾಟ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಧ್ರುವ್ ಎನ್‌ಜಿ: ನಾಗರಿಕ ಹಾಗೂ ವಾಣಿಜ್ಯ ಹೆಲಿಕಾಪ್ಟರ್ ವಿಭಾಗಕ್ಕೆ ಎಚ್‌ಎಎಲ್ ಪ್ರವೇಶಿಸುವಲ್ಲಿ ಧ್ರುವ್ ಎನ್‌ಜಿ ಮಹತ್ವದ ಹೆಜ್ಜೆಯಾಗಿದೆ. ನಾಗರಿಕ ಕಾರ್ಯಾಚರಣೆಗಳಿಗೆ ರೂಪುಗೊಂಡಿರುವ ಈ ಹೆಲಿಕಾಪ್ಟರ್ ಸುಧಾರಿತ ವ್ಯವಸ್ಥೆಗಳು, ಆಧುನಿಕ ಏವಿಯಾನಿಕ್ಸ್ ಹಾಗೂ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿದೆ. ಪ್ರಯಾಣಿಕರ ಸಾಗಣೆ, ತುರ್ತು ವೈದ್ಯಕೀಯ ಸೇವೆ ಮತ್ತು ಸಮುದ್ರದ ಹೊರಭಾಗದ ಸರಕು-ಸೇವಾ ಕಾರ್ಯಾಚರಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಇದನ್ನು ಬಳಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande