
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಗೌರಿ-ಗಣೇಶ ಹಬ್ಬ ಮುಗಿದು ದಿನಗಳು ಕಳೆದರೂ ಬೆಂಗಳೂರಿನ ಹಲವು ರಸ್ತೆ ಬದಿಗಳಲ್ಲಿ ತ್ಯಾಜ್ಯ ರಾಶಿಗಳು ಹಾಗೆಯೇ ಬಿದ್ದಿವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಹೂವು, ಹಣ್ಣು, ಬಾಳೆಕಂಬ, ಪೂಜಾ ಸಾಮಗ್ರಿ ಹಾಗೂ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳು ರಸ್ತೆ ಬದಿಗಳಲ್ಲಿ ರಾಶಿಯಾಗಿ ಬಿದ್ದಿವೆ. ಕೊಳೆತ ತ್ಯಾಜ್ಯದಿಂದ ದುರ್ವಾಸನೆ ಹರಡುತ್ತಿದ್ದು, ನೊಣ-ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳು ಕಸವನ್ನು ಎಳೆದಾಡುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, ಸರ್ಕಾರ ಹೇಳುತ್ತಿರುವ ‘ಬ್ರ್ಯಾಂಡ್ ಬೆಂಗಳೂರು’ ಎಲ್ಲಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಪ್ರಚಾರ ಮಾತ್ರ ನಡೆಯುತ್ತಿದ್ದು, ವಾಸ್ತವದಲ್ಲಿ ನಗರ ಕಸದ ರಾಶಿಯಲ್ಲಿ ಮುಳುಗುತ್ತಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೆ. ಕೃಷ್ಣಪ್ಪ ಅವರು ‘ಕಸದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭಿಸಿ ಪ್ರಚಾರ ನಡೆಸಿದ್ದು ಬಿಟ್ಟರೆ ನಗರದಲ್ಲಿ ನಿರೀಕ್ಷಿತ ಸ್ವಚ್ಛತಾ ಕಾರ್ಯ ನಡೆದಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ. ಹಬ್ಬದ ಮುನ್ನ ಪ್ರಚಾರಕ್ಕಾಗಿ ಸ್ವಚ್ಛತಾ ವ್ಯವಸ್ಥೆ ಕೈಗೊಂಡು, ಹಬ್ಬ ಮುಗಿದ ಬಳಿಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅವಕಾಶ ನೀಡುವುದು ಇದೇನಾ ಆಡಳಿತ ಮಾದರಿ ಎಂದು ಪ್ರಶ್ನಿಸಿದ್ದಾರೆ.
ರಾಜಧಾನಿಯ ಜನರಿಗೆ ಜಾಹೀರಾತು ಫಲಕಗಳ ಮೇಲಿನ ‘ಬ್ರ್ಯಾಂಡ್ ಬೆಂಗಳೂರು’ಗಿಂತ ರಸ್ತೆಗಳ ಮೇಲಿನ ಸ್ವಚ್ಛ ಬೆಂಗಳೂರು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ನಗರವನ್ನು ಕಸದ ತೊಟ್ಟಿಯನ್ನಾಗಿ ಮಾಡುವ ಬದಲು ಕೂಡಲೇ ತ್ಯಾಜ್ಯ ತೆರವುಗೊಳಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿರುವ ಅಶೋಕ್, ಪ್ರಚಾರಕ್ಕೆ ‘ಬ್ರ್ಯಾಂಡ್ ಬೆಂಗಳೂರು’ ಆಗಿದ್ದು, ವಾಸ್ತವದಲ್ಲಿ ‘ಕಸದ ಬೆಂಗಳೂರು’ ಆಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.