
ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ಲೈನ್ ಸಂಚಾರಕ್ಕೆ ಸಜ್ಜಾಗುತ್ತಿರುವ ಬೆನ್ನಲ್ಲೇ, ತಾವರೆಕೆರೆ ಮೆಟ್ರೋ ನಿಲ್ದಾಣದ ನಾಮಕರಣ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಒಂದೆಡೆ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಎಸ್.ಜಿ. ಪಾಳ್ಯ’ ಎಂದು ಮರುನಾಮಕರಣ ಮಾಡುವಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಎಂಆರ್ಸಿಎಲ್ಗೆ ಪತ್ರ ಬರೆದಿದ್ದರೆ, ಮತ್ತೊಂದೆಡೆ ಸ್ಥಳೀಯ ಮುಸ್ಲಿಂ ಮುಖಂಡರು ‘ಬಿಸ್ಮಿಲ್ಲಾ ನಗರ’ ಎಂದು ಹೆಸರಿಡುವಂತೆ ಆಗ್ರಹಿಸಿದ್ದಾರೆ.
ತಾವರೆಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಗಣನೀಯವಾಗಿದ್ದು, ‘ಬಿಸ್ಮಿಲ್ಲಾ ನಗರ’ ಎಂಬ ಹೆಸರು ಸ್ಥಳೀಯವಾಗಿ ದಶಕಗಳಿಂದ ಬಳಕೆಯಲ್ಲಿದೆ.
ಹೀಗಾಗಿ ನಿಲ್ದಾಣದ ಸುತ್ತಮುತ್ತಲಿನ ಜನರ ಭಾವನೆ ಹಾಗೂ ಸ್ಥಳೀಯವಾಗಿ ಪ್ರಚಲಿತದಲ್ಲಿರುವ ಹೆಸರನ್ನು ಪರಿಗಣಿಸಿ ‘ಬಿಸ್ಮಿಲ್ಲಾ ನಗರ’ ಎಂದು ನಾಮಕರಣ ಮಾಡಬೇಕು ಎಂಬುದು ಮುಸ್ಲಿಂ ಮುಖಂಡರ ಬೇಡಿಕೆಯಾಗಿದೆ.
ಸ್ಥಳೀಯ ಮುಸ್ಲಿಂ ಮುಖಂಡರ ಹೇಳಿಕೆಯಂತೆ, ‘ಬಿಸ್ಮಿಲ್ಲಾ ನಗರ’ ಎಂಬ ಹೆಸರು ಈ ಭಾಗದ ಜನರೊಂದಿಗೆ ಭಾವನಾತ್ಮಕ ನಂಟು ಹೊಂದಿದೆ. ನಿಲ್ದಾಣಕ್ಕೆ ಸ್ಥಳೀಯವಾಗಿ ಹೆಚ್ಚು ಪರಿಚಿತವಾಗಿರುವ ಹೆಸರನ್ನೇ ನೀಡುವುದು ಸೂಕ್ತವಾಗಿದ್ದು, ಸಾರ್ವಜನಿಕರ ಅಭಿಪ್ರಾಯಕ್ಕೂ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳ ಹೆಸರು ಬದಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಎಂಆರ್ಸಿಎಲ್ಗೆ ಪತ್ರ ಬರೆದಿದ್ದರು. ಅದರಂತೆ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಎಸ್.ಜಿ. ಪಾಳ್ಯ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ.
ಹೀಗಾಗಿ ಒಂದೇ ಮೆಟ್ರೋ ನಿಲ್ದಾಣಕ್ಕೆ ‘ಎಸ್.ಜಿ. ಪಾಳ್ಯ’ ಹಾಗೂ ‘ಬಿಸ್ಮಿಲ್ಲಾ ನಗರ’ ಎಂಬ ಎರಡು ವಿಭಿನ್ನ ಹೆಸರುಗಳ ಬೇಡಿಕೆಗಳು ಕೇಳಿಬಂದಿದ್ದು, ನಾಮಕರಣ ವಿಚಾರ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.
ಮೆಟ್ರೋ ಸಂಚಾರ ಆರಂಭಕ್ಕೂ ಮುನ್ನವೇ ನಿಲ್ದಾಣದ ಹೆಸರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿರುವುದು ಬಿಎಂಆರ್ಸಿಎಲ್ಗೆ ಹೊಸ ಸವಾಲಾಗಿ ಪರಿಣಮಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R