
ಬಾಗಲಕೋಟೆ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಕಲಚೇತನ ಮಕ್ಕಳಿಗೆ ಶಿಕ್ಷಣ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಅನುಕೂಲವಾಗುವಂತೆ ಅಗತ್ಯ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ರಬಕವಿ ನಗರದ ಎಂ.ಪಿ.ಎಸ್. ಶಾಲೆಯಲ್ಲಿ ಆಯೋಜಿಸಲಾಗಿದ್ದ ಪರಿಕರಗಳ ವಿತರಣಾ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ ಪಾಲ್ಗೊಂಡು ಮಕ್ಕಳಿಗೆ ಪರಿಕರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಿದ್ದು ಸವದಿ, ವಿಕಲಚೇತನ ಮಕ್ಕಳು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಅಗತ್ಯವಾದ ಅವಕಾಶ ಹಾಗೂ ಸಹಕಾರ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶಿಕ್ಷಣದಿಂದ ಪ್ರತಿಯೊಬ್ಬ ಮಗುವಿನಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಹೊರತರುವ ಸಾಧ್ಯತೆ ಇದೆ. ಯಾವುದೇ ಮಗು ದೈಹಿಕ ಅಥವಾ ಇತರ ಕಾರಣಗಳಿಂದ ಶಿಕ್ಷಣದಿಂದ ವಂಚಿತವಾಗಬಾರದು. ಇಂತಹ ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ ಸೌಲಭ್ಯ, ಪರಿಕರ ಹಾಗೂ ಪ್ರೋತ್ಸಾಹ ದೊರೆತರೆ ಅವರು ಕೂಡ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಶಿಕ್ಷಣ ಇಲಾಖೆಯ ವತಿಯಿಂದ ವಿಕಲಚೇತನ ಮಕ್ಕಳ ಅಗತ್ಯತೆಗಳನ್ನು ಗುರುತಿಸಿ ಅವರಿಗೆ ಅನುಕೂಲವಾಗುವ ವಿವಿಧ ಸಹಾಯಕ ಪರಿಕರಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ಪೋಷಕರಲ್ಲಿಯೂ ಭರವಸೆ ಮೂಡಿಸುತ್ತವೆ ಎಂದು ಶಾಸಕ ಸಿದ್ದು ಸವದಿ ಅಭಿಪ್ರಾಯಪಟ್ಟರು.
ವಿಕಲಚೇತನ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳು ಸಮರ್ಪಕವಾಗಿ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶಾಲಾ ಹಂತದಲ್ಲಿಯೇ ಮಕ್ಕಳ ಅಗತ್ಯತೆಗಳನ್ನು ಗುರುತಿಸಿ, ಅವರ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಮೂಲಕ ಅವರನ್ನು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲಗೊಳಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪರಿಕರಗಳನ್ನು ಸ್ವೀಕರಿಸಿದ ಮಕ್ಕಳು ಹಾಗೂ ಅವರ ಪೋಷಕರು ಸಂತಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande