ಒತ್ತಡಕ್ಕೆ ಮಣಿಯದೆ ಸರ್ಕಾರಿ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಲು ಶಾಸಕರ ತಾಕೀತು
ಒತ್ತಡಕ್ಕೆ ಮಣಿಯದೆ ಸರ್ಕಾರಿ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಲು ಶಾಸಕರ ತಾಕೀತು
ಕೋಲಾರ ತಾಲ್ಲೂಕಿನ ವೇಮಗಲ್ನಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಸಾರ್ವಜನಿಕರ ಅಹವಾಲುಗಳನ್ನು ಪರಿಶೀಲಿಸಿದರು.


ಕೋಲಾರ,12 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಕಾನೂನಿನ ಮುಂದೆ ಮಗನಾಗಲಿ, ಸ್ನೇಹಿತನಾಗಲಿ ಸಾರ್ವಜನಿಕರು ಎಲ್ಲರೂ ಒಂದೇ. ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯಯುತವಾಗಿ ಕೆಲಸ ಮಾಡಬೇಕು ಮಹತ್ವದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ಮುಗಿಯುವವರೆಗೂ ಕಂದಾಯ ಇಲಾಖೆಯ ಆರ್ಐಗಳು, ಕಾರ್ಯದರ್ಶಿಗಳು, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಛೇರಿಗಳಲ್ಲಿ ಇದ್ದು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಬೇಕು. ಕರ್ತವ್ಯ ನಿರ್ಲಕ್ಷಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಎಚ್ಚರಿಕೆ ನೀಡಿದರು.

ಕೋಲಾರ ತಾಲೂಕಿನ ವೇಮಗಲ್ ಬಯಲು ರಂಗಮಂದಿರದಲ್ಲಿ ಶನಿವಾರ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಸಾರ್ವಜನಿಕರು ಬೆಳಿಗ್ಗೆ ಅರ್ಜಿ ಸಲ್ಲಿಸಿ ಮಧ್ಯಾಹ್ನದೊಳಗೆ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು ೪೩೨ ಹಿರಿಯ ನಾಗರಿಕರು ಪಿಂಚಣಿಗಾಗಿ ಅರ್ಜಿಗಳನ್ನು ಸಲ್ಲಿಸಿದರು. ಅಷ್ಟು ಜನಕ್ಕೆ ಸ್ಥಳದಲ್ಲೇ ಅದೇಶ ಪತ್ರ ನೀಡಲಾಗಿದೆ ೩೪ ಪಲಾನುಭವಿಗಳಿಗೆ ಮನೆ ಹಕ್ಕುಪತ್ರ ಸೇರಿದಂತೆ ವಿವಿಧ ಇಲಾಖೆಗಳ ೮೪ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲಾಗಿದೆ. ಸರ್ಕಾರದ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಯಾವುದೇ ಆದೇಶ ಅಥವಾ ಸೌಲಭ್ಯಕ್ಕೆ ಅರ್ಹತೆ ಇದ್ದಲ್ಲಿ ಸ್ಥಳದಲ್ಲಿಯೇ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಮತ್ತೆ ಅದೇ ಆಟ ಮುಂದುವರೆದರೆ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ. ಕೋಲಾರ ಜಿಲ್ಲೆಯ ಯಾವುದೇ ತಾಲೂಕು ಕಚೇರಿಗೆ ಸಾರ್ವಜನಿಕರು ಅಲೆದಾಡದಂತೆ ಕೆಲಸ ಮಾಡಬೇಕು. ಸರ್ಕಾರದ ಸೇವೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ಪ್ರಜಾ ಸೇವೆ ಆಂದೋಲನವನ್ನು ವಕ್ಕಲೇರಿ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗುವುದು. ಆ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬೇರೆಬೇರೆ ಹೆಸರಿನಲ್ಲಿ ಜನಸ್ಪಂದನಾ ಕಾರ್ಯಕ್ರಮಗಳು ನಡೆದಿದ್ದರೂ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಜನರ ಸಮಸ್ಯೆಗಳನ್ನು ಹತ್ತಿರದಿಂದ ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾ ಸೇವೆ ಇಲಾಖೆಯನ್ನು ಆರಂಭಿಸಿ, ಹಿರಿಯ ಅಧಿಕಾರಿಯನ್ನು ನೇಮಿಸಿ ಅವರ ಮಾರ್ಗದರ್ಶನದಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಮನವಿಗಳಲ್ಲಿ ಶೇ ೯೦ರಷ್ಟು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಪ್ರತಿ ಹೋಬಳಿ ಕೇಂದ್ರದಲ್ಲಿ ಶನಿವಾರ ಕಾರ್ಯಕ್ರಮ ನಡೆಯುತ್ತಿದ್ದು, ಅಧಿಕಾರಿಗಳಿಗೆ ಎರಡನೇ ಶನಿವಾರವು ರಜೆ ನೀಡದೆ ಸೇವೆ ಒದಗಿಸಲಾಗುತ್ತಿದೆ. ವೇಮಗಲ್ ದೊಡ್ಡ ಹೋಬಳಿಯಾಗಿದ್ದರೂ ಜನರಲ್ಲಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಅಧಿಕಾರಿಗಳು ಮನೆಮನೆಗೆ ಕರಪತ್ರ ನೀಡಿ ಜನರನ್ನು ಆಹ್ವಾನಿಸಿರುವುದು ಶ್ಲಾಘನೀಯ ಎಂದರು.

ಹೆಚ್ಚಿನ ಅರ್ಜಿಗಳು ಕಂದಾಯ ಇಲಾಖೆಗೆ ಬರುತ್ತಿದ್ದು, ಅವುಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳನ್ನೂ ಬಗೆಹರಿಸಬೇಕು. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ಸಮಸ್ಯೆ ನಿವಾರಣೆಗೆ ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿ ಜಾರಿ ಮಾಡಿದ್ದು ಕೆ.ಸಿ. ವ್ಯಾಲಿಯಿಂದ ೪೮೦ ಎಂಎಲ್ಡಿ ನೀರು ಬರಬೇಕಿದ್ದರೂ ೨೦೦ ಎಂಎಲ್ಡಿ ಮಾತ್ರ ಬರುತ್ತಿದೆ ಅದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪೂರ್ಣಪ್ರಮಾಣದ ನೀರಿನ ಜೊತೆಗೆ ಎತ್ತಿನಹೊಳೆ ಯೋಜನೆಗೆ ವೇಗ ನೀಡಲಾಗುವುದು ಎಂದು ಹೇಳಿದರು.

ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕೋಲಾರ ತಾಲೂಕನ್ನು ವಿಭಜಿಸಿ ಹೊಸ ತಾಲೂಕು ರಚನೆಗೆ ಜನಗಣತಿ ನಡೆಸಿ ಶೀಘ್ರ ಕ್ರಮ ಕೈಗೊಳ್ಳಬೇಕು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲಾಖೆಯಲ್ಲಿ ಹಲವು ಬದಲಾವಣೆ ತಂದಿದ್ದು, ಇನ್ನೂ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ, ಎರಡನೇ ಮತ್ತು ನಾಲ್ಕನೇ ಶನಿವಾರ ಆಯಾ ಭಾಗದ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಹಿಂದೆ ಸಾರ್ವಜನಿಕರ ದೈನಂದಿನ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆ ನಿಧಾನವಾಗಿ ಸ್ಪಂದಿಸುತ್ತಿತ್ತು. ಈಗ ಒಂದೇ ವೇದಿಕೆಯಲ್ಲಿ ವಿವಿಧ ಇಲಾಖೆಗಳ ಕೌಂಟರ್ಗಳನ್ನು ತೆರೆದು ನೂರಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುತ್ತಿದೆ. ಸ್ಥಳೀಯವಾಗಿ ಪರಿಹರಿಸಲಾಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸದಿದ್ದರೆ ನೇರವಾಗಿ ಜಿಲ್ಲಾಡಳಿತಕ್ಕೆ ದೂರು ನೀಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನುಷಾ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ವೇಮಗಲ್-ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೇಮಗಲ್ ಮುನಿಯಪ್ಪ, ಉಪ ಅರಣ್ಯಾಧಿಕಾರಿ ಸರೀನಾ ಸಿಕ್ಕಲಿಗರ್, ತಹಶೀಲ್ದಾರ್ ಶ್ರೀನಿವಾಸ್ ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande