
ನವದೆಹಲಿ, 10 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಛತ್ತೀಸ್‌ಗಢದ ಜೈವ ವೈವಿಧ್ಯದಿಂದ ಸಮೃದ್ಧವಾಗಿರುವ ಹಸ್ದೇವ್ ಅರಣ್ಯ ಪರಿಸರ ವ್ಯವಸ್ಥೆಯಲ್ಲಿನ ತಾರಾ ಕಲ್ಲಿದ್ದಲು ಬ್ಲಾಕ್‌ನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹರಾಜು ಮಾಡಿರುವುದನ್ನು ಕಾಂಗ್ರೆಸ್ ಸಂಸದ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ತೀವ್ರವಾಗಿ ಖಂಡಿಸಿದ್ದಾರೆ.
ತಾರಾ ಕಲ್ಲಿದ್ದಲು ಬ್ಲಾಕ್‌ನ ಹರಾಜಿನಲ್ಲಿ ವಿಜೇತ ಸಂಸ್ಥೆ ಯಾರೆಂಬುದು ಯಾವುದೇ ರಹಸ್ಯವಲ್ಲ. ಸಿಜಿ ಸಿನ್-ಗ್ಯಾಸ್ ಆ್ಯಂಡ್ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆ ಹರಾಜಿನಲ್ಲಿ ವಿಜೇತವಾಗಿದೆ. ಈ ಸಂಸ್ಥೆಯು ಮುಂದ್ರಾ ಸಿನ್‌ಎನರ್ಜಿ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಮುಂದ್ರಾ ಸಿನ್‌ಎನರ್ಜಿ ಲಿಮಿಟೆಡ್ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ ಎಂದು ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನಿರ್ಧಾರವನ್ನು ಹಲವು ಪ್ರಮುಖ ಅಂಶಗಳ ಹಿನ್ನೆಲೆಯಲ್ಲಿ ನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. 2022ರ ಜುಲೈ 26ರಂದು ಛತ್ತೀಸ್‌ಗಢ ವಿಧಾನಸಭೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿ, ಹಸ್ದೇವ್-ಅರಣ್ಯದಲ್ಲಿ ಇನ್ನು ಯಾವುದೇ ಕಲ್ಲಿದ್ದಲು ಬ್ಲಾಕ್‌ಗೆ ಹಂಚಿಕೆ ಅಥವಾ ಹರಾಜು ನಡೆಸಬಾರದು ಎಂದು ಒತ್ತಾಯಿಸಿತ್ತು ಎಂದು ತಿಳಿಸಿದ್ದಾರೆ.
2023ರ ಜುಲೈ 16ರಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹಸ್ದೇವ್-ಅರಣ್ಯದಲ್ಲಿ ಯಾವುದೇ ಹೊಸ ಗಣಿ ಹಂಚಿಕೆ ಅಥವಾ ಅಭಿವೃದ್ಧಿಪಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಇದೇ ವೇಳೆ, 2023ರ ಅಕ್ಟೋಬರ್ 19ರಂದು ಕೇಂದ್ರ ಕಲ್ಲಿದ್ದಲು ಸಚಿವಾಲಯ ತಾರಾ ಸೇರಿದಂತೆ 40 ಕಲ್ಲಿದ್ದಲು ಬ್ಲಾಕ್‌ಗಳನ್ನು ಹರಾಜು ಪ್ರಕ್ರಿಯೆಯಿಂದ ವಾಸ್ತವವಾಗಿ ಕೈಬಿಟ್ಟಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ 15 ವರ್ಷಗಳಿಂದ ಸ್ಥಳೀಯ ಆದಿವಾಸಿಗಳು ಹಾಗೂ ಇತರ ಸಮುದಾಯಗಳು ತಮ್ಮ ಕಾಡುಗಳು ಮತ್ತು ಅವುಗಳ ಮೇಲೆ ಅವಲಂಬಿತವಾಗಿರುವ ಜೀವನೋಪಾಯವನ್ನು ರಕ್ಷಿಸುವಂತೆ ನಿರಂತರ ಹೋರಾಟ ನಡೆಸುತ್ತಿವೆ. ಗ್ರಾಮಸಭೆಗಳ ನಿರ್ಣಯಗಳು, ಜನಾಂದೋಲನಗಳು, ಧರಣಿಗಳು ಹಾಗೂ ಪ್ರತಿಭಟನಾ ಮೆರವಣಿಗೆಗಳ ಮೂಲಕ ಹೋರಾಟ ನಡೆಸಲಾಗಿದ್ದು, ರಾಯಪುರದವರೆಗೂ ಪ್ರತಿಭಟನಾ ಮೆರವಣಿಗೆ ನಡೆದಿತ್ತು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ತಾರಾ ಕಲ್ಲಿದ್ದಲು ಬ್ಲಾಕ್ ಸುಮಾರು 5,000 ಎಕರೆ ಪ್ರದೇಶದಲ್ಲಿ ಹರಡಿದ್ದು, ಇದರಲ್ಲಿ 4,000 ಎಕರೆಗೂ ಹೆಚ್ಚು ಪ್ರದೇಶ ದಟ್ಟ ಅರಣ್ಯವಾಗಿದೆ. ಅರಣ್ಯ ನಾಶಕ್ಕೆ ಬದಲಾಗಿ ಬೇರೆಡೆ ಮರಗಳನ್ನು ನೆಡುವ ಪರಿಹಾರಾತ್ಮಕ ಅರಣ್ಯೀಕರಣ ಪರಿಕಲ್ಪನೆಯೇ ಅರ್ಥಹೀನವಾಗಿದ್ದು, ಇಂತಹ ಬೃಹತ್ ನೈಸರ್ಗಿಕ ಅರಣ್ಯ ಪ್ರದೇಶದ ಉದ್ದೇಶಪೂರ್ವಕ ನಾಶವನ್ನು ಯಾವುದೇ ರೀತಿಯ ಪರಿಹಾರಾತ್ಮಕ ಅರಣ್ಯೀಕರಣದಿಂದ ಸರಿದೂಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಗಣಿ ಚಟುವಟಿಕೆಗಾಗಿ 10 ಲಕ್ಷಕ್ಕೂ ಹೆಚ್ಚು ಮರಗಳನ್ನು ಸಂಪೂರ್ಣವಾಗಿ ಕಡಿದುಹಾಕಬೇಕಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಲೆಮರು ಆನೆ ಸಂರಕ್ಷಿತ ಪ್ರದೇಶದ ಸುತ್ತಮುತ್ತ ಗಣಿಗಾರಿಕೆ ನಡೆಯುವುದರಿಂದ ಭಾರತದ ರಾಷ್ಟ್ರೀಯ ಪರಂಪರೆ ಪ್ರಾಣಿಯಾಗಿರುವ ಆನೆಯ ಸಂಚಾರ ಮಾರ್ಗಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಈಗಾಗಲೇ ಆನೆಗಳ ಸಂಖ್ಯೆಯಲ್ಲಿ ಇಳಿಕೆಯ ಆತಂಕವಿರುವ ಸಂದರ್ಭದಲ್ಲಿ ಈ ಗಣಿಗಾರಿಕೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಅವರು ಹೇಳಿದ್ದಾರೆ.
ಇದರ ಜತೆಗೆ ಹಲವು ಇತರ ಜೀವಿ ಪ್ರಭೇದಗಳೂ ಅಪಾಯಕ್ಕೆ ಸಿಲುಕಲಿದ್ದು, ಅವುಗಳಲ್ಲಿ ಕೆಲವು ಈಗಾಗಲೇ ತೀವ್ರವಾಗಿ ಅಳಿವಿನಂಚಿನಲ್ಲಿವೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಹಿಂದೆ ತಾರಾ ಕಲ್ಲಿದ್ದಲು ಬ್ಲಾಕ್ ಎಂದು ಕರೆಯಲಾಗುತ್ತಿದ್ದ ಪ್ರದೇಶದ ಹೆಸರನ್ನು ಇದೀಗ ‘ತಾರಾ (ಪರಿಷ್ಕೃತ)’ ಎಂದು ಬದಲಾಯಿಸಲಾಗಿದೆ. ಆದರೆ ಹೆಸರಿನ ಬದಲಾವಣೆಯಿಂದ ಪರಿಸರದ ಮೇಲಿನ ಪರಿಣಾಮದಲ್ಲಿ ಯಾವುದೇ ಮಹತ್ವದ ಬದಲಾವಣೆ ಉಂಟಾಗುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಂಪೂರ್ಣ ಬೆಂಬಲದೊಂದಿಗೆ ಪರಿಸರ ನಾಶ ಹೇಗೆ ನಡೆಯುತ್ತಿದೆ ಎಂಬುದಕ್ಕೆ ತಾರಾ ಕಲ್ಲಿದ್ದಲು ಬ್ಲಾಕ್‌ನಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿರುವುದು ಮತ್ತೊಂದು ಉದಾಹರಣೆಯಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.