
ಬೆಂಗಳೂರು, 31 ಆಗಸ್ಟ್ (ಹಿ.ಸ.)
ಆ್ಯಂಕರ್:
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ದುರಂತದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದವರ ಪತ್ತೆ ಮತ್ತು ರಕ್ಷಣಾ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿದೆ.
ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಅಭಿಜಿತ್ ಗೌಡ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ.ನೇಪಾಳಕ್ಕೆ ತೆರಳಿ ಸದ್ಯ ಸಂಕಷ್ಟದಲ್ಲಿರುವ ಕರ್ನಾಟಕದವರನ್ನು ಪತ್ತೆಹಚ್ಚುವುದು, ರಕ್ಷಣಾ ಕಾರ್ಯಾಚರಣೆಯ ಸಮನ್ವಯ ಮಾಡುವುದು ಹಾಗೂ ಅವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರುವ ಕಾರ್ಯವನ್ನು ಅಭಿಜಿತ್ ಗೌಡ ಅವರು ನಿರ್ವಹಿಸಲಿದ್ದಾರೆ.
ನೋಡಲ್ ಅಧಿಕಾರಿಯಾಗಿ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ನೇಪಾಳದಲ್ಲಿರುವ ಕನ್ನಡಿಗರ ನೆರವಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಸಂಗ್ರಹಿಸಿ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸುವ ಹೊಣೆಯನ್ನೂ ಅವರಿಗೆ ನೀಡಲಾಗಿದೆ.
ಈ ನಡುವೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ದೆಹಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ಸಮೀರ್ ಶುಕ್ಲಾ ಅವರಿಂದ ನೇಪಾಳದಲ್ಲಿರುವ ಕನ್ನಡಿಗರ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.ರಾಜ್ಯದಿಂದ ಒಟ್ಟು 33 ಮಂದಿ ನೇಪಾಳಕ್ಕೆ ತೆರಳಿದ್ದರು. ಈ ಪೈಕಿ ಇಬ್ಬರು ಈಗಾಗಲೇ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇನ್ನು ಕೆಲವರನ್ನು ಪತ್ತೆಹಚ್ಚಲಾಗಿದ್ದು, 14 ಮಂದಿ ಇನ್ನೂ ಪತ್ತೆಯಾಗಬೇಕಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವವರ ಪೈಕಿ ಇಬ್ಬರು ಮೈಸೂರು ಮೂಲದವರಾಗಿದ್ದು, ಉಳಿದವರು ಬೆಂಗಳೂರಿಗೆ ಸೇರಿದವರು ಎಂದು ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾಗಿರುವವರ ಪತ್ತೆ ಹಾಗೂ ಸಂಕಷ್ಟದಲ್ಲಿರುವವರ ಸುರಕ್ಷಿತ ವಾಪಸಾತಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R