
ಬೆಂಗಳೂರು, 31 ಆಗಸ್ಟ್ (ಹಿ.ಸ.)
ಆ್ಯಂಕರ್:
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಹಾರ ಉತ್ಪನ್ನಗಳ ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಹೋಟೆಲ್, ರೆಸ್ಟೋರೆಂಟ್ಗಳ ಮೇಲೂ ದಾಳಿ ನಡೆಸುತ್ತಿರುವ ಅಧಿಕಾರಿಗಳು ಇದೀಗ ಮಸಾಲೆ ಪದಾರ್ಥಗಳು ಮತ್ತು ಮಸಾಲೆ ಪುಡಿಗಳ ಗುಣಮಟ್ಟದ ಪರಿಶೀಲನೆಗೆ ಮುಂದಾಗಿದ್ದಾರೆ.
ಇತ್ತೀಚೆಗೆ ಕಳಪೆ ಗುಣಮಟ್ಟದ ಇಂಗು ಮಾರಾಟದ ವಿರುದ್ಧ ಕ್ರಮ ಕೈಗೊಂಡಿದ್ದ ಇಲಾಖೆ, ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬ್ರ್ಯಾಂಡ್ಗಳ ಮಸಾಲೆ ಉತ್ಪನ್ನಗಳತ್ತ ಗಮನ ಹರಿಸಿದೆ. ಮಸಾಲೆ ಪದಾರ್ಥಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಹಾಗೂ ಅನುಮೋದಿತ ಮಿತಿಗಿಂತ ಹೆಚ್ಚಿನ ಕೃತಕ ಬಣ್ಣಗಳ ಬಳಕೆಯಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪರಿಶೀಲನೆಗೆ ಮುಂದಾಗಿದೆ.
ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ಇಥಿಲೀನ್ ಆಕ್ಸೈಡ್ ಸೇರಿದಂತೆ ಅಪಾಯಕಾರಿ ರಾಸಾಯನಿಕಗಳ ಬಳಕೆಯಾಗುತ್ತಿರುವ ಶಂಕೆ ವ್ಯಕ್ತವಾಗಿದ್ದು, ಇಂತಹ ರಾಸಾಯನಿಕಗಳ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಕಠಿಣ ಮಾನದಂಡಗಳನ್ನು ರೂಪಿಸುವಂತೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಮನವಿ ಮಾಡಿದೆ. ರಾಜ್ಯದಿಂದ ಬಂದಿರುವ ಮನವಿ ಹಾಗೂ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಮಟ್ಟದಲ್ಲಿಯೂ ಈ ವಿಚಾರದ ಬಗ್ಗೆ ಗಮನ ಹರಿಸಲಾಗಿದೆ.
ಇತ್ತೀಚೆಗೆ ಎವರೆಸ್ಟ್ ಹಾಗೂ ಎಲ್ಜಿ ಕಂಪನಿಗಳ ಇಂಗು ಉತ್ಪನ್ನಗಳಲ್ಲಿ ಆಲ್ಕೋಹಾಲ್ ಸೋಲ್ಯುಬಲ್ ಪ್ರಮಾಣಕ್ಕೆ ಸಂಬಂಧಿಸಿದಂತೆ ಗುಣಮಟ್ಟದ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳ ಮಾರಾಟ ಹಾಗೂ ಉತ್ಪಾದನೆಗೆ ನಿರ್ಬಂಧ ವಿಧಿಸಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮಸಾಲೆ ಉತ್ಪನ್ನಗಳ ಗುಣಮಟ್ಟದ ಬಗ್ಗೆಯೂ ತೀವ್ರ ಪರಿಶೀಲನೆ ನಡೆಸಲು ಇಲಾಖೆ ಮುಂದಾಗಿದೆ.
ಮುಂದಿನ ಹಂತದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸಾಂಬಾರ್ ಪೌಡರ್, ಗರಂ ಮಸಾಲೆ, ಚಿಕನ್ ಮಸಾಲೆ, ಅರಿಶಿನ ಪುಡಿ, ಖಾರದ ಪುಡಿ ಸೇರಿದಂತೆ ವಿವಿಧ ಮಸಾಲೆ ಉತ್ಪನ್ನಗಳ ಮಾದರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಸಂಗ್ರಹಿಸಲಾದ ಮಾದರಿಗಳನ್ನು NABL ಮಾನ್ಯತೆ ಪಡೆದ ಅಧಿಕೃತ ಪ್ರಯೋಗಾಲಯಗಳಿಗೆ ಕಳುಹಿಸಿ, ಅವುಗಳಲ್ಲಿ ಕೃತಕ ಬಣ್ಣ, ಕೀಟನಾಶಕಗಳ ಶೇಷ, ರಾಸಾಯನಿಕಗಳ ಪ್ರಮಾಣ ಸೇರಿದಂತೆ ವಿವಿಧ ಗುಣಮಟ್ಟದ ಮಾನದಂಡಗಳನ್ನು ಪರೀಕ್ಷಿಸಲಾಗುತ್ತದೆ.
ಪರೀಕ್ಷಾ ವರದಿಯಲ್ಲಿ ಅನುಮೋದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು ಅಥವಾ ಕೃತಕ ಬಣ್ಣ ಬಳಕೆಯಾಗಿರುವುದು ದೃಢಪಟ್ಟರೆ, ಸಂಬಂಧಪಟ್ಟ ತಯಾರಕ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಅಗತ್ಯವಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಹಾಗೂ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ವಿಧಿಸುವ ಕ್ರಮವನ್ನೂ ಕೈಗೊಳ್ಳಲಾಗುತ್ತದೆ.
ಮಸಾಲೆ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ನಡೆಯಲಿರುವ ಈ ತಪಾಸಣಾ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R