
ಬೆಂಗಳೂರು, 31 ಆಗಸ್ಟ್ (ಹಿ.ಸ.):
ಆ್ಯಂಕರ್:ಪೊಲೀಸ್ ಸಿಬ್ಬಂದಿಯ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಇಲಾಖೆಯನ್ನು ಮತ್ತಷ್ಟು ಬಲಿಷ್ಠ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ನಡೆದ ‘ಗೃಹ ಸಚಿವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್, ಸಹಾಯಕ ಉಪನಿರೀಕ್ಷಕ ಹಾಗೂ ಉಪನಿರೀಕ್ಷಕರೊಂದಿಗೆ ಅವರು ಸಂವಾದ ನಡೆಸಿದರು.
ಕರ್ತವ್ಯದ ಒತ್ತಡ, ಆರೋಗ್ಯ, ಮಾನಸಿಕ ಕ್ಷೇಮ, ವರ್ಗಾವಣೆ, ಬಡ್ತಿ, ಸೇವಾ ಮೌಲ್ಯಮಾಪನ, ಕುಟುಂಬದ ಸಮಸ್ಯೆಗಳು, ಮಕ್ಕಳ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಕುರಿತು ಸಿಬ್ಬಂದಿಯಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಮಾದಕ ವಸ್ತುಗಳ ವಿರುದ್ಧದ ‘ಬೇಡ ಬ್ರೋ’ ಅಭಿಯಾನವನ್ನು ಮಿಷನ್ ಮಾದರಿಯಲ್ಲಿ ಮುನ್ನಡೆಸಿ, ಗಾಂಜಾ ಹಾಗೂ ಕೃತಕ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಸೂಚಿಸಿದರು. ರೌಡಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರೌಡಿಗಳೊಂದಿಗೆ ಯಾವುದೇ ರೀತಿಯ ಸ್ನೇಹ ಅಥವಾ ಮಾಹಿತಿ ಹಂಚಿಕೆಗೆ ಅವಕಾಶ ನೀಡಬಾರದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚುತ್ತಿರುವ ಸೈಬರ್ ಅಪರಾಧ, ಡಿಜಿಟಲ್ ಬಂಧನ, ಆರ್ಥಿಕ ವಂಚನೆ, ಸೈಬರ್ ಕಿರುಕುಳ ಹಾಗೂ ಲೈಂಗಿಕ ಸುಲಿಗೆ ಪ್ರಕರಣಗಳಿಗೆ ಪೊಲೀಸರು ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು. ಮಹಿಳೆಯರ ಖಾಸಗಿ ಚಿತ್ರಗಳು ಮತ್ತು ವಿಡಿಯೋಗಳ ದುರ್ಬಳಕೆ ಪ್ರಕರಣಗಳಲ್ಲಿ ಸಂವೇದನಾಶೀಲವಾಗಿ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಲು ಪ್ರತ್ಯೇಕ ಯೋಜನೆ ರೂಪಿಸಲಾಗುವುದು. ವರ್ಗಾವಣೆ, ಬಡ್ತಿ ಹಾಗೂ ಸೇವಾ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು. ಸೇವಾವಧಿಯ ಜತೆಗೆ ಕಾರ್ಯಕ್ಷಮತೆಗೂ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಸಿಬ್ಬಂದಿಯ ಮಕ್ಕಳ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಕ್ಕೆ ಅಗತ್ಯ ತರಬೇತಿಗೂ ವಿಶೇಷ ಗಮನ ನೀಡಲಾಗುವುದು. ಸ್ನೇಹಪರ ಪೊಲೀಸ್ ಠಾಣೆ ಎಂದರೆ ಕೇವಲ ಉತ್ತಮ ಕಟ್ಟಡವಲ್ಲ; ಸಾರ್ವಜನಿಕರೊಂದಿಗೆ ಮಾನವೀಯತೆ ಮತ್ತು ಗೌರವದಿಂದ ವರ್ತಿಸುವ ವ್ಯವಸ್ಥೆ ಎಂದು ಅವರು ಹೇಳಿದರು.
ಕರ್ನಾಟಕವನ್ನು ಸುರಕ್ಷಿತ, ಶಾಂತಿಯುತ ಹಾಗೂ ಹೂಡಿಕೆಗೆ ವಿಶ್ವಾಸಾರ್ಹ ತಾಣವನ್ನಾಗಿ ಮಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಸಿಬ್ಬಂದಿಯ ಸಮಸ್ಯೆಗಳಿಗೆ ಸ್ಪಂದಿಸಿ ಇಲಾಖೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.