
ಕಂಪ್ಲಿ, 31 ಆಗಸ್ಟ್ (ಹಿ.ಸ.)
ಆ್ಯಂಕರ್: ಜಿಲ್ಲಾಧಿಕಾರಿಗಳ ನಿರ್ದೇಶನ ಹಾಗೂ ‘ಪ್ಯಾನ್-ಇಂಡಿಯಾ ರಕ್ಷಣಾ ಮತ್ತು ಪುನರ್ವಸತಿ ಅಭಿಯಾನ’ ಅಂಗವಾಗಿ ಸೋಮವಾರ ಕಂಪ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು.
ಸಭೆಯ ನಂತರ ಟಾಸ್ಕ್ ಫೋರ್ಸ್ ಸಮಿತಿಯ ಅಧಿಕಾರಿಗಳ ತಂಡವು ಕಂಪ್ಲಿ ವ್ಯಾಪ್ತಿಯ ವಿವಿಧ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ನಡೆಸಿತು. ಈ ಪರಿಶೀಲನೆ ವೇಳೆ ಕೆಲಸ ನಿರ್ವಹಿಸುತ್ತಿದ್ದ ಐವರು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಅಧಿಕಾರಿಗಳು ತಕ್ಷಣವೇ ರಕ್ಷಿಸಿ, ಸ್ಥಳದಲ್ಲೇ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡರು. ರಕ್ಷಿಸಲ್ಪಟ್ಟ ಮಕ್ಕಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ವಾಣಿಜ್ಯ ಸಂಸ್ಥೆ ಹಾಗೂ ಉದ್ದಿಮೆಗಳ ಮಾಲೀಕರಿಗೆ ಕರಪತ್ರ ಮತ್ತು ಪೋಸ್ಟರ್ಗಳನ್ನು ವಿತರಿಸುವ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಕಂಪ್ಲಿ ತಾಲೂಕು ಕಾರ್ಮಿಕ ನಿರೀಕ್ಷಕ ಶಿವಶಂಕರ್ ತಳವಾರ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಸಮಾಜ ಕಲ್ಯಾಣ ಇಲಾಖೆಯ ಕೆ.ವಿರೂಪಾಕ್ಷಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶೋಭಾ, ಶಿಕ್ಷಣ ಇಲಾಖೆಯ ಟಿ. ಬಸವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲತೀಫ, ಕೃಷಿ ಇಲಾಖೆಯ ಜ್ಯೋತಿ, ಆರೋಗ್ಯ ಇಲಾಖೆಯ ಕೆ. ಶೋಭಾ, ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ್, ಮಕ್ಕಳ ಸಹಾಯವಾಣಿಯ ಕಿರಣ್, ಪ್ಯಾರಾ ಲೀಗಲ್ ಸ್ವಯಂಸೇವಕಿ ಲಕ್ಷಿö್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್