
ಬಳ್ಳಾರಿ, 31 ಆಗಸ್ಟ್ (ಹಿ.ಸ.)
ಆ್ಯಂಕರ್: ಇಂದು ಉತ್ತರಾಧನೆ ಅಂಗವಾಗಿ ನಗರದ ಸತ್ಯನಾರಾಯಣಪೇಟೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿ ರಥೋತ್ಸವ ನಡೆಯಿತು.ಶ್ರೀಮಠದ ಪ್ರಧಾನ ವ್ಯವಸ್ಥಾಪಕ ಪಂ. ಪ್ರಸನ್ನಾಚಾರ ಐ.ಜಿ. ಅವರ ನೇತೃತ್ವದಲ್ಲಿ ನೂತನ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಗುರುರಾಯರಿಗೆ ಭಕ್ತಿ ಸಮರ್ಪಿಸಿದರು.
ಸಾಮೂಹಿಕ ಭಜನೆ, ಡೊಳ್ಳು ಕುಣಿತ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ರಥವು ಶ್ರೀಮಠದಿಂದ ಶ್ರೀರಾಘವೇಂದ್ರ ವೃತ್ತ, ಕೂಲ್ ಕಾರ್ನರ್, ಪಾಂಡುರಂಗ ಆಸ್ಪತ್ರೆ, ನಾಗಮ್ಮ ಬಾಡಿ ಶಾಲೆ, ಉತ್ತರಾಧಿಮಠದ ಮಾರ್ಗವಾಗಿ ಸಂಚರಿಸಿ ಮರಳಿ ಶ್ರೀಮಠವನ್ನು ತಲುಪಿತು.ಶ್ರೀ ಆಂಜನೇಯ ಹಾಗೂ ಶ್ರೀರಾಮನ ವೇಷಧಾರಿಗಳು ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದರು.
ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಅತ್ಯಂತ ವೈಭವ ಹಾಗೂ ಭಕ್ತಿಭಾವದಿಂದ ನೆರವೇರಿತು.
ಉತ್ತರಾಧಿಮಠದ ಬಳಿ ಪಂ. ನವೀನ್ ಆಚಾರ ಹಾಗೂ ಪಂ. ಪ್ರವೀಣ್ ಆಚಾರ ಅವರು ರಥೋತ್ಸವಕ್ಕೆ ಮಂಗಳಾರತಿ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಬಳಿಕ ಪಂ. ಪ್ರಸನ್ನಾಚಾರ ಐ.ಜಿ. ಹಾಗೂ ಪಂ. ಗುರುರಾಜ ಆಚಾರ್ಯ ಅವರು ಭಕ್ತರಿಗೆ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಿಸಿದರು.
ಉತ್ತರಾರಾಧನೆ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪಂ. ಪ್ರಸನ್ನಾಚಾರ ಐ.ಜಿ. ಅವರ ನೇತೃತ್ವದಲ್ಲಿ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಅಷ್ಟೋತ್ತರ ಪಾರಾಯಣ, ಗುರುರಾಯರಿಗೆ ಪಂಚಾಮೃತಾಭಿಷೇಕ, ಕನಕ ಮಹಾಪೂಜೆ, ಅರ್ಚನೆ, ವಿಶೇಷ ಅಲಂಕಾರ, ಹಸ್ತೋದಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು, ಗಣ್ಯರು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ದಿನವಿಡೀ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್