
ನವದೆಹಲಿ, 30 ಆಗಸ್ಟ್ (ಹಿ.ಸ.):
ಆ್ಯಂಕರ್:
ಬೆಂಗಳೂರಿನಲ್ಲಿ ನಡೆದ ಅಲ್‌ಹಿಂದ್ ಐಸಿಸ್ ಭಯೋತ್ಪಾದನಾ ಸಂಚು ಪ್ರಕರಣದಲ್ಲಿ ಪ್ರಮುಖ ಆರೋಪಿ ಸಯ್ಯದ್ ಫಸಿಯೂರ್ ರೆಹಮಾನ್‌ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹48 ಸಾವಿರ ದಂಡ ವಿಧಿಸಿದೆ.
2020ರ ಜನವರಿ 10ರಂದು ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಜನವರಿ 23ರಂದು ಎನ್‌ಐಎ ಪ್ರಕರಣವನ್ನು ವಹಿಸಿಕೊಂಡು ಮರುದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 20 ಆರೋಪಿಗಳ ವಿರುದ್ಧ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ. ವಿಚಾರಣೆ 2025ರ ಅಕ್ಟೋಬರ್‌ನಲ್ಲಿ ಆರಂಭವಾಗಿದ್ದು, ಈ ಹಿಂದೆ ಹನೀಫ್ ಖಾನ್ ಜುಲೈ 14ರಂದು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನನ್ನು ದೋಷಿ ಎಂದು ಘೋಷಿಸಿತ್ತು.
ಎನ್‌ಐಎ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಮೆಹಬೂಬ್ ಪಾಷಾ ಬೆಂಗಳೂರಿನ ಗುರುಪ್ಪನಪಾಳ್ಯದಲ್ಲಿರುವ ತನ್ನ ನಿವಾಸದಲ್ಲಿ ಸಭೆಗಳನ್ನು ನಡೆಸಿ, ಕೋಮು ಗಲಭೆ ಪ್ರಚೋದಿಸಲು ಹಾಗೂ ಉಗ್ರ ಸಂಘಟನೆಯ ಉದ್ದೇಶವನ್ನು ಮುಂದುವರಿಸಲು ಉದ್ದೇಶಿತ ಹತ್ಯೆಗಳ ಸಂಚು ರೂಪಿಸಿದ್ದ ಎನ್ನಲಾಗಿದೆ.
ಸಯ್ಯದ್ ಫಸಿಯೂರ್ ರೆಹಮಾನ್ ಸಂಚು ಸಭೆಗಳಲ್ಲಿ ಭಾಗವಹಿಸಿದ್ದಲ್ಲದೆ, ಅಲ್‌ಹಿಂದ್ ಗುಂಪಿನ ಸದಸ್ಯರಿಗೆ ಕಾಡಿನ ತರಬೇತಿ ನೀಡಲು ಡೆಕಾಥ್ಲಾನ್ ಕ್ರೀಡಾ ಮಳಿಗೆಯಿಂದ ಟೆಂಟ್‌ಗಳು ಹಾಗೂ ಚಾಕುಗಳನ್ನು ಖರೀದಿಸಿದ್ದ ಎಂದು ಎನ್‌ಐಎ ತಿಳಿಸಿದೆ. ಸಂಚಿನ ಉದ್ದೇಶ ಐಸಿಸ್ ನಿಯಂತ್ರಿತ ಪ್ರಾಂತ್ಯ ಸ್ಥಾಪಿಸುವುದಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಮುಂದುವರಿದ ತನಿಖೆಯಲ್ಲಿ ಸಂಚಿನ ಭಾಗವಾಗಿ ಈ ಘಟಕವನ್ನು ರೂಪಿಸಲು ಯೋಜನೆ ರೂಪಿಸಿದ ಆನ್‌ಲೈನ್ ನಿರ್ವಾಹಕನ ಪತ್ತೆಗೆ ಎನ್‌ಐಎ ಪ್ರಯತ್ನ ಮುಂದುವರಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.