ನೇಪಾಳದ ಪ್ರವಾಹ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾಗೆ ಖರ್ಗೆ ಪತ್ರ; ತಕ್ಷಣ ಪರಿಹಾರಕ್ಕೆ ಆಗ್ರಹ
ನವದೆಹಲಿ, 29 ಆಗಸ್ಟ್ (ಹಿ.ಸ.): ಆ್ಯಂಕರ್:ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ
काँग्रेस अध्यक्ष मल्लिकार्जुन खरगे


ನವದೆಹಲಿ, 29 ಆಗಸ್ಟ್ (ಹಿ.ಸ.):

ಆ್ಯಂಕರ್:ನೇಪಾಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ಸೃಷ್ಟಿಯಾಗಿರುವ ಪರಿಸ್ಥಿತಿಯ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕವಾಗಿ ಎರಡು ಪತ್ರಗಳನ್ನು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ನೇಪಾಳದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಹಾಗೂ ಭಾರತೀಯ ಮೂಲದವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಪ್ರವಾಹದಿಂದ ಸಂಕಷ್ಟಕ್ಕೊಳಗಾದ ನೇಪಾಳದ ಜನರಿಗೆ ಮಾನವೀಯ ಹಾಗೂ ಪರಿಹಾರ ನೆರವು ಒದಗಿಸುವಂತೆ ಆಗ್ರಹಿಸಿದ್ದಾರೆ.

ನೇಪಾಳದಲ್ಲಿ ಪ್ರವಾಹದಿಂದ ಉಂಟಾಗಿರುವ ಭಾರಿ ಹಾನಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಖರ್ಗೆ, ಮಾಧ್ಯಮ ವರದಿಗಳ ಪ್ರಕಾರ ಪ್ರವಾಹದಲ್ಲಿ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 1,000 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಾರು ಜನರು ಆಹಾರ, ಔಷಧ ಹಾಗೂ ಆಶ್ರಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.

ನೇಪಾಳ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಪ್ರವಾಹ ಪೀಡಿತರಿಗೆ ಅಗತ್ಯ ಮಾನವೀಯ ಹಾಗೂ ಪರಿಹಾರ ನೆರವು ಒದಗಿಸುವುದನ್ನು ಖಚಿತಪಡಿಸಬೇಕು. ಸಂಕಷ್ಟದ ಈ ಸಂದರ್ಭದಲ್ಲಿ ನೇಪಾಳದ ಜನರಿಗೆ ಭಾರತ ಸಾಧ್ಯವಿರುವ ಎಲ್ಲ ನೆರವು ನೀಡಬೇಕು ಎಂದು ಪ್ರಧಾನಿ ಅವರನ್ನು ಖರ್ಗೆ ಒತ್ತಾಯಿಸಿದ್ದಾರೆ.

ನೇಪಾಳದ ವಿವಿಧ ಪ್ರದೇಶಗಳಲ್ಲಿ ಭಾರತೀಯ ನಾಗರಿಕರು ಹಾಗೂ ಭಾರತೀಯ ಮೂಲದವರು ಸಿಲುಕಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸಿಲುಕಿರುವವರ ರಕ್ಷಣೆ ಹಾಗೂ ಸುರಕ್ಷಿತ ಸ್ಥಳಾಂತರ ಕಾರ್ಯವನ್ನು ತ್ವರಿತಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿರುವ ಖರ್ಗೆ, ನೇಪಾಳದಲ್ಲಿರುವ 320 ಭಾರತೀಯ ನಾಗರಿಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಅವರ ಸುರಕ್ಷಿತ ಹಾಗೂ ಶೀಘ್ರ ಭಾರತ ವಾಪಸಾತಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಎನ್‌ಡಿಆರ್‌ಎಫ್ ತಂಡ ಕಳುಹಿಸಲು ಮನವಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ನೇಪಾಳದ ಪ್ರವಾಹದಿಂದ ಅಪಾರ ಸಂಖ್ಯೆಯ ಜನರು ಬಾಧಿತರಾಗಿದ್ದು, ಮನೆಗಳು ಹಾಗೂ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಅನೇಕರು ಸ್ಥಳಾಂತರಗೊಂಡಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ.

ಭಾರತ ಮತ್ತು ನೇಪಾಳದ ಜನರ ನಡುವೆ ದೀರ್ಘಕಾಲದ ಆಪ್ತ ಸಂಬಂಧಗಳಿವೆ. ಹೀಗಾಗಿ ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತ ನೇಪಾಳದ ಜನರೊಂದಿಗೆ ದೃಢವಾಗಿ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.

ನೇಪಾಳಕ್ಕೆ ತಕ್ಷಣ ಮತ್ತು ವ್ಯಾಪಕ ಮಾನವೀಯ ಹಾಗೂ ವಿಪತ್ತು ಪರಿಹಾರ ನೆರವು ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರನ್ನು ಒತ್ತಾಯಿಸಿರುವ ಖರ್ಗೆ, ನೇಪಾಳ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಪ್ರದೇಶಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಕಳುಹಿಸಬೇಕು ಎಂದು ಮನವಿ ಮಾಡಿದ್ದಾರೆ.

ನೈಸರ್ಗಿಕ ವಿಪತ್ತುಗಳನ್ನು ಎದುರಿಸುವುದು ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಎನ್‌ಡಿಆರ್‌ಎಫ್‌ಗೆ ಪರಿಣತಿ ಮತ್ತು ಅನುಭವವಿದೆ. ಹೀಗಾಗಿ ನೇಪಾಳದಲ್ಲಿ ಸಿಲುಕಿರುವವರ ರಕ್ಷಣೆ, ಸುರಕ್ಷಿತ ಸ್ಥಳಾಂತರ ಹಾಗೂ ಪರಿಹಾರ ಕಾರ್ಯಗಳಿಗೆ ಎನ್‌ಡಿಆರ್‌ಎಫ್ ತಂಡಗಳು ಮಹತ್ವದ ನೆರವು ನೀಡಬಹುದು ಎಂದು ಖರ್ಗೆ ತಿಳಿಸಿದ್ದಾರೆ.

ನೇಪಾಳದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಯ ಗಂಭೀರತೆ ಹಾಗೂ ತುರ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಭಾರತದಿಂದ ಅಗತ್ಯ ನೆರವು ತಲುಪಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande