
ಬಳ್ಳಾರಿ, 28 ಆಗಸ್ಟ್ (ಹಿ.ಸ.)
ಆ್ಯಂಕರ್: ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಯ ಮಸೂದೆಯನ್ನು ಎರಡನೇಬಾರಿಗೆ ಮಂಡನೆ ಮಾಡುವ ಪೂರ್ವದಲ್ಲಿಯೇ ಬಳ್ಳಾರಿ ಜಿಲ್ಲಾ ಬಿಜೆಪಿಯ ರಾಜಕೀಯದಲ್ಲಿ ಕ್ಷೇತ್ರಗಳ `ಅದಲು - ಬದಲು' ಪ್ರಕ್ರಿಯೆ ಪ್ರಾರಂಭವಾಗಿದೆ.
ಈ ನಿಟ್ಟಿನಲ್ಲಿ ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಅವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದತ್ತ `ಗಮನ' ಕೇಂದ್ರೀಕರಿಸುತ್ತಿರುವುದು ಅವರ ಅಭಿಮಾನಿಗಳು ಮತ್ತು ಬೆಂಬಲಿಗರಲ್ಲಿ ತೀವ್ರ ಗೊಂದಲ ಮೂಡಿದೆ.
ಕಂಪ್ಲಿ ವಿಧಾಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೊದಲ ಸುತ್ತಿನಲ್ಲಿಯೇ ಗೆಲುವು ಸಾಧಿಸಿ, ವಿಧಾನಸಭೆಯಲ್ಲಿ ಗಣಿ ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ತೋಳು ತಟ್ಟುವ ಮೂಲಕ `ದೊಡ್ಡ ಸುದ್ದಿ'ಯಾಗಿದ್ದ ಟಿ.ಎಚ್. ಸುರೇಶಬಾಬು ಅವರು ಆ ನಂತರ ಎರೆಡು ಚುನಾವಣೆಗಳಲ್ಲಿ ಸೋಲನುಭವಿಸಿ, ಎದುರಾಳಿ ಹಾಲಿ ಕಾಂಗ್ರೆಸ್ ಶಾಸಕ ಜೆ.ಎನ್. ಗಣೇಶ್ ಅವರ ಸರಳತೆ, ಜನಪ್ರಿಯತೆ, ಪ್ರಭಾವ - ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ವೈಯಕ್ತಿಕ ಸಂಪರ್ಕಗಳನ್ನು ಅರ್ಥ ಮಾಡಿಕೊಂಡು ಕ್ಷೇತ್ರವನ್ನು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ.
ಟಿ.ಎಚ್. ಸುರೇಶಬಾಬು ಅವರು ಶಾಸಕ, ತಮ್ಮ ರಾಜಕೀಯ ಗುರು - ದಿಕ್ಸೂಚಿ ಆಗಿರುವ ಜಿ. ಜನಾರ್ದನರೆಡ್ಡಿ ಅವರ ಜೊತೆಗಿನ ವೈಮನಸ್ಸುಗಳನ್ನು ಪರಿಹರಿಸಿಕೊಂಡು, ಬಿ. ಶ್ರೀರಾಮುಲು ಅವರ ಮಾರ್ಗದರ್ಶನದಲ್ಲಿ ಅವರು ಶ್ರಾವಣದಲ್ಲಿಯೇ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಲು `ಕ್ಷೇತ್ರವನ್ನು ಪ್ರವೇಶಿಸಿದ್ದಾರೆ'. ಅಷ್ಟೇ ಅಲ್ಲ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮವಾರು ಮುಖಂಡರು - ಯುವ ಮುಖಂಡರು ಮತ್ತು ರಾಜಕೀಯ ನಿರ್ಣಾಯಕ ಮುಖಂಡರನ್ನು ಭೇಟಿ ಮಾಡಿ, ಓಲೈಸಿಕೊಳ್ಳುವ ಕಸರತ್ತನ್ನು ಪ್ರಾರಂಭಿಸಿದ್ದಾರೆ.
ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆಯ ಜೊತೆಯಲ್ಲಿ ಮೀಸಲಾತಿಯನ್ನು ಪರಿಷ್ಕರಿಸಿದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವು `ಎಸ್ಟಿ ಮೀಸಲು' ಕ್ಷೇತ್ರವಾಗಿ ಮುಂದುವರೆಯಲಿದೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರವು `ಸಾಮಾನ್ಯ ಮಹಿಳೆ' ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರವು `ಸಾಮಾನ್ಯ' ವರ್ಗಕ್ಕೆ ಮೀಸಲಾಗುವ ಸಾಧ್ಯತೆಗಳಿವೆ ಎಂದು ರಾಜಕೀಯ ತಜ್ಞರು ಟಿ.ಎಚ್. ಸುರೇಶಬಾಬು ಅವರಿಗೆ ಸಲಹೆ ನೀಡಿ, ಮೊಳಕಾಲ್ಮೂರಿನತ್ತ ವಲಸೆ ಹೋಗಲು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಟಿ.ಎಚ್. ಸುರೇಶಬಾಬು ಅವರು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಸಚಿವ ಬಿ. ನಾಗೇಂದ್ರ ಅವರ ವಿರುದ್ಧದ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಹಗರಣದ `ಪಾದಯಾತ್ರೆ'ಯ ಬಿಸಿಯಲ್ಲಿರುವ ಜಿಲ್ಲಾ ಮತ್ತು ರಾಜ್ಯ ಬಿಜೆಪಿಯಲ್ಲಿ ಟಿ.ಎಚ್. ಸುರೇಶಬಾಬು ಅವರು ಕ್ಷೇತ್ರ ಬದಲಾವಣೆ ಮಾಡುತ್ತಿರುವ ವಿಷಯವು ತೀವ್ರವಾಗಿ ಚರ್ಚೆಗೊಳಗಾಗುತ್ತಿದೆ. ಅಲ್ಲದೇ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಲ್ಲಿ `ಗೆಲುವು ಸಾಧಿಸಲು' ಸಲಹೆಗಳನ್ನು - ಸೂಚನೆಗಳನ್ನು - ಮಾರ್ಗದರ್ಶನಗಳನ್ನು ಯಥೇಚ್ಛವಾಗಿ ನೀಡಲು ಅನೇಕರು ಸಾಲಿನಲ್ಲಿ ನಿಲ್ಲಲು ಸಿದ್ದತೆ ನಡೆಸಿದ್ದಾರೆ.
`ರಾಜೀನಾಮೆ ಪರ್ವ'
ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ತಮ್ಮ ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಅವರು ಕ್ಷೇತ್ರ ಬದಲಾವಣೆ ಮಾಡುತ್ತಿರುವ ಖಚಿತ ಮಾಹಿತಿಯನ್ನು ಪಡೆದು, ಪಕ್ಷದಲ್ಲಿರುವ ತಮ್ಮ `ಹುದ್ದೆ - ಜವಾಬ್ದಾರಿಗಳಿಗೆ' ರಾಜೀನಾಮೆ ಸಲ್ಲಿಸಿದ್ದು, ಭವಿಷ್ಯದಲ್ಲಿ ಇನ್ನೂ ಹಲವರು ರಾಜೀನಾಮೆ ಸಲ್ಲಿಸಲು ಮಾನಸಿಕವಾಗಿ ಸಿದ್ದತೆ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮೀಸಲಾತಿಯು ಯಥಾ ಸ್ಥಿತಿಯಲ್ಲಿದ್ದಲ್ಲಿ ಬಿಜೆಪಿಯಲ್ಲಿ `ಹೊಸ ಮುಖ'ಕ್ಕೆ ಮುಕ್ತ ಅವಕಾಶವಿದೆ ಎನ್ನುವ ಚರ್ಚೆಗಳು ಪ್ರಾರಂಭವಾಗಿವೆ. ಮೀಸಲಾತಿ ಬದಲಾದಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ `ಹೊಸ ಮುಖಂಡರ' ಉದಯಕ್ಕೆ ಅವಕಾಶಗಳಿವೆ ಎನ್ನುವ ಲೆಕ್ಕಾಚಾರಗಳಿವೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್