
ಗದಗ, 27 ಆಗಸ್ಟ್ (ಹಿ.ಸ.)
ಆ್ಯಂಕರ್:- ಅನೈತಿಕ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ದೊಣ್ಣೆ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಈರಣ್ಣ ಅಗಶಿಬಾಗಿಲು (35) ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಲಕ್ಷ್ಮೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ಹಾಗೂ ಕುಟುಂಬಸ್ಥರ ದೂರಿನ ಪ್ರಕಾರ, ರೇಣುಕಾ ಹಾಗೂ ಆಂಜನೇಯ ದಂಪತಿ ಸುಮಾರು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಮಕ್ಕಳಾಗಿರಲಿಲ್ಲ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ರೇಣುಕಾ ಮನೆಯ ಎದುರು ವಾಸವಾಗಿದ್ದ ಈರಣ್ಣನೊಂದಿಗೆ ಆತ್ಮೀಯ ಸಂಬಂಧ ಬೆಳೆದಿತ್ತು ಎಂದು ಆರೋಪಿಸಲಾಗಿದೆ.
ಇವರಿಬ್ಬರ ನಡುವಿನ ಸಂಬಂಧದ ವಿಚಾರ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸುಮಾರು ಎರಡು ವರ್ಷಗಳ ಹಿಂದೆಯೇ ವಿಷಯ ಗ್ರಾಮದ ಹಿರಿಯರ ಗಮನಕ್ಕೆ ಬಂದಿದ್ದು, ಇಬ್ಬರಿಗೂ ಬುದ್ಧಿವಾದ ಹೇಳಲಾಗಿತ್ತು ಎನ್ನಲಾಗಿದೆ. ಆದರೂ ಈರಣ್ಣ ರೇಣುಕಾಳ ಸಂಪರ್ಕವನ್ನು ಮುಂದುವರಿಸಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮತ್ತೆ ಮಹಿಳೆಯನ್ನು ಮಾತನಾಡಲು ಕರೆದಿದ್ದ ಆರೋಪ
ಘಟನೆ ನಡೆದ ದಿನ ಈರಣ್ಣ ಎಂದಿನಂತೆ ಕುರಿ ಮೇಯಿಸಿಕೊಂಡು ಮನೆಗೆ ಮರಳಿದ್ದ. ಈ ವೇಳೆ ರೇಣುಕಾಳನ್ನು ಕಂಡ ಈರಣ್ಣ ಆಕೆಯನ್ನು ಮಾತನಾಡಲು ಕರೆದಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ರೇಣುಕಾ ತನ್ನ ಪತಿ ಹಾಗೂ ಕುಟುಂಬಸ್ಥರಿಗೆ ತಿಳಿಸಿದ್ದಾಳೆ ಎಂದು ಹೇಳಲಾಗಿದೆ.
ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಈರಣ್ಣನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈರಣ್ಣ ಮನೆಯಲ್ಲಿ ಮಲಗಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿಗಳು ದೊಣ್ಣೆ ಹಾಗೂ ಕಟ್ಟಿಗೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ಈರಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಐವರ ವಿರುದ್ಧ ಆರೋಪ
ಕೊಲೆ ಪ್ರಕರಣದಲ್ಲಿ ರೇಣುಕಾ, ಆಕೆಯ ಪತಿ ಆಂಜನೇಯ, ರೇಣುಕಾಳ ತಾಯಿ ಹನಮವ್ವ, ಸಹೋದರ ಧರ್ಮರಾಜ ಹಾಗೂ ಸುರೇಶ್ ಸೇರಿದಂತೆ ಐವರ ಹೆಸರು ಕೇಳಿಬಂದಿದೆ. ಇವರ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣ, ಘಟನೆಯಲ್ಲಿ ಯಾರು ಯಾವ ರೀತಿಯಲ್ಲಿ ಭಾಗಿಯಾಗಿದ್ದಾರೆ ಹಾಗೂ ಹಲ್ಲೆಯ ಸ್ವರೂಪದ ಕುರಿತು ತನಿಖೆ ಮುಂದುವರಿದಿದೆ.
ಕುಟುಂಬಸ್ಥರ ಆಕ್ರಂದನ
ಈರಣ್ಣನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬ ಸದಸ್ಯರ ದುಃಖ ಮನಕಲಕುವಂತಿತ್ತು.
ಈರಣ್ಣ ಕುರಿಗಾಯಿಯಾಗಿ ಜೀವನ ನಡೆಸುತ್ತಿದ್ದ. ದುಡಿದು ಕುಟುಂಬವನ್ನು ನಿರ್ವಹಿಸುತ್ತಿದ್ದ ಯುವಕ ಹೀಗೆ ದುರಂತ ಅಂತ್ಯ ಕಂಡಿರುವುದು ಗ್ರಾಮಸ್ಥರಲ್ಲಿ ನೋವು ಮೂಡಿಸಿದೆ.
ಅನೈತಿಕ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಆರಂಭವಾದ ವೈಮನಸ್ಸು ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗಿದ್ದು, ಈ ಘಟನೆ ಎರಡು ಕುಟುಂಬಗಳ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಘಟನೆಗೆ ಸಂಬಂಧಿಸಿದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP