
ನವದೆಹಲಿ, 24 ಆಗಸ್ಟ್ (ಹಿ.ಸ.):
ಆ್ಯಂಕರ್:ವೈದ್ಯಕೀಯ ಉಪಕರಣಗಳ ಕ್ಷೇತ್ರದಲ್ಲಿ ಉದ್ಯಮ ನಡೆಸುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ವೈದ್ಯಕೀಯ ಉಪಕರಣಗಳ ನಿಯಮಾವಳಿ-2017ಕ್ಕೆ ತಿದ್ದುಪಡಿ ಮಾಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಇನ್ನು ಮುಂದೆ ತಮ್ಮ ವೈದ್ಯಕೀಯ ಉಪಕರಣಗಳನ್ನು ಈಗಾಗಲೇ ಮಾನ್ಯ ಪರವಾನಗಿ ಹೊಂದಿರುವ ಹೊರಗಿನ ಸಂಸ್ಥೆಯ ಮೂಲಕ ಸೋಂಕುಮುಕ್ತಗೊಳಿಸುವಿಕೆ ನಡೆಸುವ ತಯಾರಕರು ಇದಕ್ಕಾಗಿ ಪ್ರತ್ಯೇಕ ಪರವಾನಗಿ ಪಡೆಯಬೇಕಾಗಿಲ್ಲ. ಇದರಿಂದ ಪರವಾನಗಿ ಪಡೆಯುವ ಪ್ರಕ್ರಿಯೆಯ ಪುನರಾವರ್ತನೆ, ಆಡಳಿತಾತ್ಮಕ ಹೊರೆ, ಅನುಸರಣೆ ವೆಚ್ಚ ಹಾಗೂ ಸಮಯ ಕಡಿಮೆಯಾಗಲಿದೆ.
ಹೊಸ ಲೇಬಲಿಂಗ್ ನಿಯಮಗಳನ್ನು ಅಳವಡಿಸಿಕೊಳ್ಳಲು ತಯಾರಕರಿಗೆ ಆರು ತಿಂಗಳ ಪರಿವರ್ತನಾ ಅವಧಿಯನ್ನೂ ನೀಡಲಾಗಿದೆ. ಈ ಅವಧಿಯಲ್ಲಿ ಲೇಬಲಿಂಗ್, ಪ್ಯಾಕೇಜಿಂಗ್ ಸೇರಿದಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.
ನಿಯಮಾವಳಿಯ ನಿಯಮ 63ಕ್ಕೂ ತಿದ್ದುಪಡಿ ಮಾಡಲಾಗಿದ್ದು, ಯುರೋಪಿಯನ್ ಒಕ್ಕೂಟವನ್ನು ಕಠಿಣ ನಿಯಂತ್ರಣ ವ್ಯವಸ್ಥೆ ಹೊಂದಿರುವ ಮಾನ್ಯತೆ ಪಡೆದ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಯುರೋಪಿಯನ್ ಒಕ್ಕೂಟದಲ್ಲಿ ಈಗಾಗಲೇ ಅನುಮೋದನೆ ಪಡೆದ ಅರ್ಹ ವೈದ್ಯಕೀಯ ಉಪಕರಣಗಳಿಗೆ ಭಾರತದಲ್ಲಿ ವೈದ್ಯಕೀಯ ಪರೀಕ್ಷೆ ಸಂಬಂಧಿತ ಕೆಲವು ಅಗತ್ಯತೆಗಳಿಂದ ವಿನಾಯಿತಿ ದೊರೆಯಲಿದೆ. ಈ ಪಟ್ಟಿಯಲ್ಲಿ ಈ ಹಿಂದೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದ್ದವು.
ಈ ತಿದ್ದುಪಡಿಗಳಿಂದ ದೇಶದಲ್ಲಿ ಸುಧಾರಿತ ಹಾಗೂ ನವೀನ ವೈದ್ಯಕೀಯ ಉಪಕರಣಗಳ ಲಭ್ಯತೆ ವೇಗಗೊಳ್ಳಲಿದ್ದು, ಗುಣಮಟ್ಟ, ಸುರಕ್ಷತೆ ಮತ್ತು ಕಾರ್ಯಕ್ಷಮತೆಗೆ ಸಂಬಂಧಿಸಿದ ನಿಯಂತ್ರಣ ಮಾನದಂಡಗಳು ಮುಂದುವರಿಯಲಿವೆ ಎಂದು ಸಚಿವಾಲಯ ತಿಳಿಸಿದೆ. ಅಲ್ಲದೆ, ವೈದ್ಯಕೀಯ ಉಪಕರಣಗಳ ಉದ್ಯಮದಲ್ಲಿ ಪಾರದರ್ಶಕತೆ, ನಿಯಂತ್ರಣ ವ್ಯವಸ್ಥೆಯ ಸ್ಪಷ್ಟತೆ ಹಾಗೂ ಸ್ಪರ್ಧಾತ್ಮಕತೆ ಹೆಚ್ಚುವುದರೊಂದಿಗೆ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣವಾಗಲಿದೆ ಎಂದು ಸರ್ಕಾರ ಹೇಳಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.