ಬಾಗಲಕೋಟೆಯಲ್ಲಿ ಎಸ್ಐಆರ್ ಅಭಿಯಾನ
ಬಾಗಲಕೋಟೆ, 04 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನಕ್ಕೆ ಮತ್ತಷ್ಟು ವೇಗ ದೊರೆತಿದ್ದು, ಮತದಾರರ ಪಟ್ಟಿಯನ್ನು ನಿಖರ ಹಾಗೂ ಪಾರದರ್ಶಕವಾಗಿಸುವ ಉದ್ದೇಶದಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನೆಮನೆಗೆ ಭೇಟಿ ನೀಡಿ ಜ
ಮತದಾರ


ಬಾಗಲಕೋಟೆ, 04 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನಕ್ಕೆ ಮತ್ತಷ್ಟು ವೇಗ ದೊರೆತಿದ್ದು, ಮತದಾರರ ಪಟ್ಟಿಯನ್ನು ನಿಖರ ಹಾಗೂ ಪಾರದರ್ಶಕವಾಗಿಸುವ ಉದ್ದೇಶದಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

ನಗರದ ವಾರ್ಡ್ ಸಂಖ್ಯೆ 17ರ ಬೂತ್ ಸಂಖ್ಯೆ 130 ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ ಅವರು ಸರ್ಕಾರಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಭಾಸ್ಕರ ಮಾಗಿ ಅವರೊಂದಿಗೆ ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿ ಹಾಗೂ ನಿಯಮಗಳ ಕುರಿತು ವಿವರವಾಗಿ ತಿಳಿಸಿದರು.

ಅಭಿಯಾನದ ವೇಳೆ ಹಲವು ವರ್ಷಗಳಿಂದ ಬಾಗಲಕೋಟೆಯಲ್ಲಿ ನೆಲೆಸಿರುವ ರಾಜಸ್ಥಾನ ಮೂಲದ ಕುಟುಂಬಗಳನ್ನು ಭೇಟಿ ಮಾಡಿದ ಶಾಸಕ ಪೂಜಾರ, ಕರ್ನಾಟಕದಲ್ಲೇ ಶಾಶ್ವತವಾಗಿ ವಾಸವಾಗಿರುವವರು ತಮ್ಮ ಮೂಲ ರಾಜ್ಯದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಿಸಿ, ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.

ಒಬ್ಬ ವ್ಯಕ್ತಿಯ ಹೆಸರು ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ಇರುವುದು ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದ್ದು, ಇದು ಕಾನೂನುಬಾಹಿರ ಎಂದು ಅವರು ತಿಳಿಸಿದರು. ತಪ್ಪು ಮಾಹಿತಿ ನೀಡಿ ಎರಡು ಕಡೆ ಮತದಾರರಾಗಿ ಮುಂದುವರಿದರೆ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.

ಮತದಾರರ ಪಟ್ಟಿಯು ಸಂಪೂರ್ಣ ನಿಖರವಾಗಿರಬೇಕಾದರೆ ಪ್ರತಿಯೊಬ್ಬ ನಾಗರಿಕರೂ ತಮ್ಮ ವಿವರಗಳನ್ನು ಸರಿಯಾಗಿ ದಾಖಲಿಸಬೇಕು. ವಾಸಸ್ಥಳ ಬದಲಾವಣೆ, ಹೆಸರು ತಿದ್ದುಪಡಿ ಅಥವಾ ಹೊಸ ನೋಂದಣಿಗೆ ಸಂಬಂಧಿಸಿದ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕರೆ ನೀಡಿದರು.

ಎಸ್ಐಆರ್ ಅಭಿಯಾನದ ಮೂಲಕ ಮತದಾರರ ಪಟ್ಟಿಯಲ್ಲಿನ ನಕಲಿ, ದ್ವಿಪತ್ರಿಕೆ ಹಾಗೂ ಅನರ್ಹ ಹೆಸರುಗಳನ್ನು ಗುರುತಿಸಿ ತೆಗೆದುಹಾಕುವುದು ಮತ್ತು ಅರ್ಹ ಮತದಾರರನ್ನು ನೋಂದಾಯಿಸುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿದಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಮನವಿ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande