ಯೂಸರ್ನೇಮ್ ವೈಶಿಷ್ಟ್ಯದ ಕುರಿತು ಟೆಲಿಗ್ರಾಂ ಮತ್ತು ಸಿಗ್ನಲ್ಗೆ ಕೇಂದ್ರದ ನೋಟಿಸ್
ನವದೆಹಲಿ, 04 ಜುಲೈ (ಹಿ.ಸ.): ಆ್ಯಂಕರ್: ಸಂದೇಶ ವಿನಿಮಯ ವೇದಿಕೆಗಳಾದ ಟೆಲಿಗ್ರಾಂ ಮತ್ತು ಸಿಗ್ನಲ್‌ನಲ್ಲಿರುವ ಯೂಸರ್‌ನೇಮ್ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಂಡು ನಕಲಿ ಗುರುತು ಸೃಷ್ಟಿಸುವುದು ಹಾಗೂ ಆನ್‌ಲೈನ್ ವಂಚನೆ ನಡೆಯುವ ಸಾಧ್ಯತೆಗಳ ಕುರಿತು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ಹಿನ್
ಸಾಂಕೇತಿಕ


ನವದೆಹಲಿ, 04 ಜುಲೈ (ಹಿ.ಸ.):

ಆ್ಯಂಕರ್:

ಸಂದೇಶ ವಿನಿಮಯ ವೇದಿಕೆಗಳಾದ ಟೆಲಿಗ್ರಾಂ ಮತ್ತು ಸಿಗ್ನಲ್‌ನಲ್ಲಿರುವ ಯೂಸರ್‌ನೇಮ್ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಂಡು ನಕಲಿ ಗುರುತು ಸೃಷ್ಟಿಸುವುದು ಹಾಗೂ ಆನ್‌ಲೈನ್ ವಂಚನೆ ನಡೆಯುವ ಸಾಧ್ಯತೆಗಳ ಕುರಿತು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎರಡೂ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ, ಈ ವೈಶಿಷ್ಟ್ಯದ ಅಗತ್ಯತೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ವಿವರವಾದ ಸ್ಪಷ್ಟೀಕರಣ ಕೋರಿದೆ.

ಟೆಲಿಗ್ರಾಂಗೆ ಕಳುಹಿಸಿರುವ ನೋಟಿಸ್‌ನಲ್ಲಿ ಯೂಸರ್‌ನೇಮ್ ವೈಶಿಷ್ಟ್ಯವನ್ನು ಮುಂದುವರಿಸುವ ಅಗತ್ಯವೇನು, ಅದರಿಂದ ಉಂಟಾಗಬಹುದಾದ ಸೈಬರ್ ಭದ್ರತಾ ಅಪಾಯಗಳನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಕೇಳಲಾಗಿದೆ. ಇದೇ ರೀತಿಯ ವಿವರವನ್ನು ಸಿಗ್ನಲ್ ಸಂಸ್ಥೆಯಲ್ಲಿಯೂ ಸರ್ಕಾರ ಕೇಳಿದೆ.

ಇತ್ತೀಚೆಗೆ ವಾಟ್ಸ್ಆ್ಯಪ್ನಲ್ಲಿ ಹೊಸದಾಗಿ ಪರಿಚಯಿಸಲು ಉದ್ದೇಶಿಸಿದ್ದ ಯೂಸರ್‌ನೇಮ್ ವೈಶಿಷ್ಟ್ಯವನ್ನು ಭಾರತದಲ್ಲಿ ಸದ್ಯಕ್ಕೆ ಜಾರಿಗೊಳಿಸದಂತೆ ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ಸೂಚನೆ ನೀಡಿದ್ದ ಬೆನ್ನಲ್ಲೇ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಮೂರು ದಿನಗಳೊಳಗೆ ಸಲ್ಲಿಸುವಂತೆ ಹಾಗೂ ಸರ್ಕಾರದೊಂದಿಗೆ ನಡೆಯುತ್ತಿರುವ ಚರ್ಚೆ ಪೂರ್ಣಗೊಳ್ಳುವವರೆಗೆ ಅದನ್ನು ಜಾರಿಗೆ ತರದಂತೆ ಸೂಚಿಸಲಾಗಿದೆ.

ಈ ಕುರಿತು ವಾಟ್ಸ್ಆ್ಯಪ್ ಪ್ರತಿಕ್ರಿಯೆ ನೀಡಿದ್ದು, ಯೂಸರ್‌ನೇಮ್ ವ್ಯವಸ್ಥೆಯಲ್ಲಿ ನಕಲಿ ಗುರುತು ಮತ್ತು ಆನ್‌ಲೈನ್ ವಂಚನೆಯ ಅಪಾಯವನ್ನು ಕಡಿಮೆಗೊಳಿಸಲು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ, ವಿಶಿಷ್ಟ ಯೂಸರ್‌ನೇಮ್ ಮೂಲಕವೇ ಪರಸ್ಪರ ಸಂಪರ್ಕ ಸಾಧಿಸಬಹುದಾಗಿದೆ ಎಂದು ಕಂಪನಿ ಹೇಳಿದೆ.

ಇದೇ ವೇಳೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು, ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗದ ಐಫೋನ್ 18 ಪ್ರೊಗೆ ಸಂಬಂಧಿಸಿದಂತೆ ಕೇಳಿಬಂದಿರುವ ಡೇಟಾ ಸೋರಿಕೆ ಆರೋಪದ ಕುರಿತೂ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಟಾಟಾ ಎಲೆಕ್ಟ್ರಾನಿಕ್ಸ್‌ನಿಂದ ದಾಖಲೆಗಳು ಕಳವಾಗಿವೆ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಪ್ರಕರಣದ ಎಲ್ಲಾ ಅಂಶಗಳನ್ನು ತನಿಖಾ ಸಂಸ್ಥೆಗಳು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande