
ಬೆಂಗಳೂರು, 04 ಜುಲೈ (ಹಿ.ಸ.):
ಆ್ಯಂಕರ್:
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಒಂದು ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಡಿ–ಡಿಸಾಸ್ಟರ್ ಆಫ್, ಕೆ–ಕರ್ನಾಟಕ್ಸ್, ಎಸ್–ಸಕ್ಸೆಸ್ ಎಂದು ವ್ಯಂಗ್ಯವಾಡಿರುವ ಅವರು, ರಾಜ್ಯದ ಪ್ರಗತಿಗೆ ಈ ಸರ್ಕಾರವೇ ಅತಿ ದೊಡ್ಡ ವಿಪತ್ತು ಎಂದು ಆರೋಪಿಸಿದ್ದಾರೆ.
ಕೇವಲ ಒಂದು ತಿಂಗಳ ಆಡಳಿತದಲ್ಲೇ ಕೋಟ್ಯಂತರ ಕನ್ನಡಿಗರ ನಿರೀಕ್ಷೆಗಳು ಭಗ್ನಗೊಂಡಿವೆ ಎಂದು ಆರೋಪಿಸಿದ ಅಶೋಕ್, ರೈತರು ರಸಗೊಬ್ಬರಕ್ಕಾಗಿ ದಿನಗಟ್ಟಲೆ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಿಸುತ್ತಿದ್ದು, ನೀರಿನ ಸಮಸ್ಯೆ, ಬರದ ಭೀತಿ ಹಾಗೂ ಭೂಸ್ವಾಧೀನದ ಆತಂಕದಿಂದ ಸಂಕಷ್ಟದಲ್ಲಿದ್ದಾರೆ ಎಂದು ಟೀಕಿಸಿದರು.
ಯುವಕರಿಗೆ ಉದ್ಯೋಗದ ಭರವಸೆ ಈಡೇರಿಲ್ಲ, ಹೊಸ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದರು. ಮಹಿಳೆಯರ ಸುರಕ್ಷತೆ ಹದಗೆಟ್ಟಿದ್ದು, ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಹೆಸರಿನಲ್ಲಿ ಫಲಾನುಭವಿಗಳ ಮೇಲೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಡವರು ಮತ್ತು ಮಧ್ಯಮ ವರ್ಗದ ಜನರು ಬೆಲೆ ಏರಿಕೆ ಹಾಗೂ ತೆರಿಗೆಗಳ ಹೊರೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಇದು 'ಗ್ಯಾರಂಟಿ ಸರ್ಕಾರವಲ್ಲ, ಲೂಟಿ ಸರ್ಕಾರ' ಎಂದು ಅಶೋಕ್ ಟೀಕಿಸಿದರು.
ಉದ್ಯಮಿಗಳು ಅನಿಶ್ಚಿತ ಆಡಳಿತ ಮತ್ತು ಕಮಿಷನ್ ಆರೋಪಗಳಿಂದ ರಾಜ್ಯದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದು, ನೆರೆ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಗುಂಡಿ ಬಿದ್ದ ರಸ್ತೆಗಳು ಮತ್ತು ಯೋಜನಾ ರಹಿತ ಆಡಳಿತದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜನರಿಗೆ ಆಡಳಿತ ಕಾಣುತ್ತಿಲ್ಲ; ಸುಳ್ಳು ಪ್ರಚಾರ ಮತ್ತು ಭ್ರಷ್ಟಾಚಾರ ಮಾತ್ರ ಕಾಣುತ್ತಿದೆ. ಕೇವಲ 30 ದಿನಗಳ ಆಡಳಿತದಲ್ಲೇ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕರ್ನಾಟಕದ ಭವಿಷ್ಯದ ಬಗ್ಗೆ ಆತಂಕ ಮೂಡಿದೆ ಎಂದು ಅಶೋಕ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಸರ್ಕಾರವನ್ನು ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.